ತೂಮಿನಾಡು, ಮಂಜೇಶ್ವರ ಪರಿಸರದ 7 ಸ್ಥಳಗಳಿಗೆ ಹೈಮ್ಯಾಕ್ಸ್ ಬೆಳಕಿನ ಭಾಗ್ಯ

ನಮ್ಮ ಪ್ರತಿನಿಧಿ ವರದಿ 

ಮಂಜೇಶ್ವರ : ಮಂಜೇಶ್ವರ ಶಾಸಕರ ನಿಧಿಯಿಂದ ಮಂಜೂರಾದ ಹೈಮ್ಯಾಕ್ಸ್ ಬೆಳಕಿನ ಭಾಗ್ಯ ಮಂಜೇಶ್ವರ ಪರಿಸರದ ಕಡಂಬಾರ್ ಜಂಕ್ಷನ್, ಬಂಗ್ರ ಮಂಜೇಶ್ವರ, ಗೋವಿಂದ ಪೈ ಗಿಳಿವಿಂಡು, ಹೊಸಬೆಟ್ಟು, ಗೇರುಕಟ್ಟೆ, ತೂಮಿನಾಡು ಸೇರಿದಂತೆ 7 ಸ್ಥಳಗಳಿಗೆ ಮಂಜೂರಾಗಿದೆ.

ಶಾಸಕ ಪಿ ಬಿ ಅಬ್ದುಲ್ ರಜಾಕ್ ನಿಧಿಯಿಂದ ಈ ಮೊದಲು ಹಲವು ಕಡೆಗಳಿಗೆ ಹೈಮ್ಯಾಕ್ಸ್ ಬೆಳಕನ್ನು ಹಾಕಿದ್ದರೂ ಕೆಲ ಪ್ರದೇಶಗಳಲ್ಲಿ ಹಾಕದೇ ಇರುವುದು ಚರ್ಚೆಗೆ ಗ್ರಾಸವಾಗುವುದರ ಜೊತೆಯಾಗಿ ಶಾಸಕರಿಗೂ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಇದೀಗ ಉಳಿದ ಸ್ಥಳಗಳಿಗೆ ಹೈಮ್ಯಾಕ್ಸ್ ಬೆಳಕಿನ ಭಾಗ್ಯ ದೊರೆತಿದೆ.

ಇದರಂತೆ ಸೋಮವಾರ ಹೈಮ್ಯಾಕ್ಸ್ ಅಳವಡಿಸುವ ಕೆಲಸಕ್ಕೆ ಸಂಬಂಧಪಟ್ಟವರು ಆಗಮಿಸಿ ನಿರ್ಧಿಷ್ಟ ಸ್ಥಳಗಳನ್ನು ಗುರುತಿಸಿದ್ದಾರೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಂಡು ಹೈಮ್ಯಾಕ್ಸ್ ಬೆಳಕು ಬರುವ ಸಂತೋಷದಲ್ಲಿದ್ದಾರೆ ಊರಿನ ಜನತೆ. ತೂಮಿನಾಡಿನಲ್ಲಿ ಸ್ಥಳ ಗುರುತು ಮಾಡುವ ಸಂದರ್ಭ ವಾರ್ಡ್ ಸದಸ್ಯೆ ಸಹಿತ ಹಲವಾರು ಮಂದಿ ಊರವರು ಪಾಲ್ಗೊಂಡರು.

ಕೆಲ ದಿನಗಳ ಹಿಂದೆ ತೂಮಿನಾಡು ಪದವು ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡ ಬೆನ್ನಲ್ಲೇ ಇದೀಗ ತೂಮಿನಾಡು ಜಂಕ್ಷನ್ನಿಗೆ ಹೈಮ್ಯಾಕ್ಸ್ ಬೆಳಕಿನ ಭಾಗ್ಯ ದೊರೆತಿರುವುದು ಶಾಸಕರ ಅಭಿವೃದ್ಧಿ ವೈಖರಿಗೆ ಇನ್ನಷ್ಟು ಪುಷ್ಟಿ ನೀಡಿದೆ.