ಕಾವ್ಯಾ ಸಾವಿನ ಉನ್ನತ ತನಿಖೆಗೆ ಆಗ್ರಹ

ಆಳ್ವಾಸ್, ಧರ್ಮಸ್ಥಳ ವಿರುದ್ಧ ವಿಮಲಾ ವಾಗ್ದಾಳಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ಅನುಮಾನಾಸ್ಪದ ಸಾವಿನ ಉನ್ನತ ತನಿಖೆಗೆ ಒತ್ತಾಯಿಸಿ, ಶೈಕ್ಷಣಿಕ ಹತ್ಯೆಗಳನ್ನು ತಡೆಗಟ್ಟಲು, ನಿಯಮಬಾಹಿರವಾಗಿ ಕಾರ್ಯಾಚರಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಸೋಮವಾರ ಬೆಳಿಗ್ಗೆ ಸಮಾನ ಮನಸ್ಕ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಾಮೂಹಿಕ ಧರಣಿ ನಡೆಯಿತು.

ಮಹಿಳಾಪರ ಹೋರಾಟಗಾರ್ತಿ ಬೆಂಗಳೂರಿನ ಕೆ ಎಸ್ ವಿಮಲಾ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು.“ಇದೊಂದು ವ್ಯವಸ್ಥಿತ ಕೊಲೆಯಾಗಿದ್ದು, ತನ್ನ ಪ್ರಭಾವವನ್ನು ಬಳಸಿ ಇಲ್ಲಿ ಕಾಣದ ಶಕ್ತಿಗಳು ಪ್ರಕರಣವನ್ನು ಮುಚ್ಚಿ ಹಾಕುತ್ತಿದ್ದಾರೆ.ಕರಾವಳಿಯಲ್ಲಿ ಮೂಡುಬಿದಿರೆಯ ಆಳ್ವಾಸ್ ಮತ್ತು ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರು ಶಕ್ತಿ ಕೇಂದ್ರವಾಗಿ ಮಾರ್ಪಟಿದ್ದಾರೆ. ಇದನ್ನು ಮಟ್ಟ ಹಾಕಲು ರಾಜ್ಯ ಸರಕಾರ ವಿಫಲವಾಗಿದೆ” ಎಂದರು.

“ಆಳ್ವಾಸಿನಲ್ಲಿ 10 ವರ್ಷಗಳಲ್ಲಿ 15 ಸಾವಾಗಿದೆ. ಕಾವ್ಯಾ ಸಾವಿನ ಪ್ರಕರಣದ ಬಳಿಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಮಿತಿಯೊಂದನ್ನು ರಚಿಸಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಲೋಪದೋಷಗಳ ವರದಿ ನೀಡುವಂತೆ ಕೋರಿದ್ದರು. ಅದರ ಅವಧಿ ಮುಗಿದಿದ್ದು, ತಕ್ಷಣ ವರದಿಯನ್ನು ಬಹಿರಂಗಗೊಳಿಸಿ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ” ಎಂದು ಆಗ್ರಹಿಸಿದರು.

“ಕರಾವಳಿ ಜಿಲ್ಲೆಯನ್ನು ಹಿಂದುತ್ವದ ಲ್ಯಾಬೋಲ್ಯಾರೇಟರಿಯನ್ನಾಗಿ ಬಿಜೆಪಿ ಮಾಡಿಕೊಂಡಿದೆ. ಅಗ್ನಿಕುಂಡಕ್ಕೆ ತುಪ್ಪ ಸುರಿಯುವವರು ಇಲ್ಲಿ ಆಳ್ವಾಸಿನಂತಹ ಜನರಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಇಲ್ಲಿ ಬೃಹತ್ ರ್ಯಾಲಿ ನಡೆಸಿದ ಶೋಭಾ ಕರಂದ್ಲಾಜೆ, ಯಡ್ಡಿಯೂರಪ್ಪ, ನಳಿನ್ ಕಟೀಲು ಅವರಿಗೆ ಕಾವ್ಯಾಳಿಗೆ ನ್ಯಾಯ ಕೊಡಿಸುವ ನೆನಪಾಗಿಲ್ಲವೇ” ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಡಿವೈಎಫೈ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸುನಿನಕುಮಾರ್ ಬಜಾಲ್, ಜಯಂತಿ ಶೆಟ್ಟಿ, ಕಾವ್ಯಾಳ ತಾಯಿ ಬೇಬಿ, ತಂದೆ ರಾಜೇಶ್, ವಿಚಾರವಾದಿ ನರೇಂದ್ರ ನಾಯಕ್ ಸೇರಿದಂತೆ ಹಲವು ಮಂದಿ ಮುಖಂಡರು ಇದ್ದರು.