ವಕೀಲರ ಅನುಮತಿ ಪಡೆಯದೆ ಕಕ್ಷಿಗಾರ ತನಗಿಷ್ಟದ ಬೇರೊಬ್ಬರನ್ನು ನೇಮಿಸಬಹುದು : ಹೈ ಕೋರ್ಟ್

ಬೆಂಗಳೂರು : ಕಕ್ಷಿಗಾರರಿಗೆ ತಮಗೆ ಬೇಕಾದ ವಕೀಲರನ್ನು ಆಯ್ಕೆ ಮಾಡುವ ಸಂಪೂರ್ಣ ಹಕ್ಕು  ಇದ್ದಂತೆಯೇ, ಆ ವಕೀಲರಿಂದ ಪಡೆಯುವ ಸೇವೆಯನ್ನು ಸ್ಥಗಿತಗೊಳಿಸುವ ಹಾಗೂ ಅವರ ಅನುಮತಿಗಾಗಿ ಕಾಯದೆ ಹೊಸ ವಕೀಲರನ್ನು ನೇಮಿಸುವ ಎಲ್ಲಾ ಹಕ್ಕು ಕೂಡ ಇದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಆದರೆ ಅದೇ ಸಮಯ ಹೊಸ ವಕೀಲರನ್ನು ನೇಮಿಸುವ ಸಂದರ್ಭದಲ್ಲಿ ಕಕ್ಷಿಗಾರರು ತಮ್ಮ ಹಳೆಯ ವಕೀಲರಿಗೆ ಒಂದು ಮಾತು ಹೇಳುವುದು ಉತ್ತಮ ಸಂಪ್ರದಾಯವಾಗುತ್ತದೆ ಎಂದು ಡಿಸೆಂಬರ್ 2ರಂದು ಹೈಕೋರ್ಟ್ ತನ್ನ ಆದೇಶವೊಂದರಲ್ಲಿ ನ್ಯಾಯಾಲಯ ಹೇಳಿದೆ.

“ಹಿಂದಕ್ಕೆ ಪಡೆಯಲಾಗದಂತಹ ವಕಾಲತ್ ನಾಮ ಎಂಬುದಿಲ್ಲ. ಕಕ್ಷಿಗಾರರಿಗೆ ತಮ್ಮ ವಕೀಲರನ್ನು ಬದಲಾಯಿಸುವ ಹಕ್ಕಿದೆ ಹಾಗೂ ಈ ಕಾರ್ಯವನ್ನು ಯಾವಾಗ ಬೇಕಾದರೂ ಕಾರಣವಿದ್ದು ಅಥವಾ ಇಲ್ಲದೆಯೇ ಮಾಡಬಹುದು. ಹೀಗೆ ವಕೀಲರನ್ನು ಬದಲಾಯಿಸಿದಾಗ ಹಳೆಯ ವಕೀಲರಿಂದ ತಮ್ಮ ಕೇಸಿಗೆ ಸಂಬಂಧಪಟ್ಟ ಎಲ್ಲಾ ಕಡತಗಳನ್ನೂ ಹಿಂದಕ್ಕೆ ಪಡೆಯುವ ಹಕ್ಕು ಕಕ್ಷಿಗಾರರಿಗೆ ಇದೆ. ವಕೀಲರು ಅದನ್ನು ಹಿಂದಿರುಗಿಸಿಲ್ಲವೆಂದಾದರೆ ಅದು 1961ರ ಅಡ್ವಕೇಟ್ಸ್ ಆ್ಯಕ್ಟ್ ಇದರ ಸೆಕ್ಷನ್ 35 ಇದರ ಉಲ್ಲಂಘನೆಯಾಗುತ್ತದೆ” ಎಂದು ಹೇಳಿದ ನ್ಯಾಯಾಲಯ  ತಮ್ಮ ಹುದ್ದೆಯ ಘನೆತೆಗೆ ತಕ್ಕಂತೆ ಕಡತಗಳನ್ನು ಹಿಂದಿರುಗಿಸುವುದು ವಕೀಲರೊಬ್ಬರ ಕಾನೂನುಬದ್ಧ ಕರ್ತವ್ಯವಾಗಿರುತ್ತದೆ ಹಾಗೂ ಇದು ನೈತಿಕ ದೃಷ್ಟಿಯಿಂದಲೂ ಅನಿವಾರ್ಯವಾಗುತ್ತ್ತದೆ” ಎದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಒಂದು ವೇಳೆ ಕಕ್ಷಿಗಾರ ತನಗೆ ನೀಡಬೇಕಾದ ಸಂಭಾವನೆ ಬಗ್ಗೆ ವಕೀಲರಿಗೆ ಏನಾದರೂ ತಕರಾರು ಇದ್ದ ಪಕ್ಷದಲ್ಲಿಯೂ ಮೊದಲು ಕಡತಗಳನ್ನು ಹಿಂದಿರುಗಿಸಿ ನಂತರ ತಮ್ಮ ದೂರನ್ನು ಸಂಬಂಧಪಟ್ಟ ವೇದಿಕೆ ಮುಂದೆ ಕೊಂಡೊಯ್ಯಬೇಕೆಂದು ನ್ಯಾಯಾಲಯ ತಿಳಿಸಿದೆ.