ಸಿದ್ದು `ಜಾತಿ ರಾಜಕೀಯ’ದಿಂದ ಹೈಕಮಾಂಡಿಗೆ ತಲೆನೋವು

ಬೆಂಗಳೂರು : ಮುಂದಿನ ವಿಧಾನಸಭೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿಯಿರುವಂತೆಯೇ ರಾಜ್ಯದಲ್ಲಿನ ಸಿದ್ದರಾಮಯ್ಯ ಸರಕಾರದ ಅಭಿವೃದ್ಧಿ ಅಜೆಂಡಾದ ಬದಲು ಜಾತಿ ರಾಜಕೀಯವೇ ಮೇಲುಗೈ ಸಾಧಿಸುತ್ತಿರುವುದರ ಪರಿಣಾಮಗಳ ಬಗ್ಗೆ ಪಕ್ಷದ ಹೈಕಮಾಂಡ್ ಆತಂಕಗೊಂಡಿದೆ.

ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಸುತ್ತಿದ್ದಾರೆಂಬ ಭಾವನೆ ಮತ್ತು ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿಸಲು ಅವರು ತೋರಿಸುತ್ತಿರುವ ಆಸಕ್ತಿ ಪಕ್ಷದ ಹಿರಿಯ ನಾಯಕರಿಗೆ ಇಷ್ಟವಾಗಿಲ್ಲ.

ಪಕ್ಷದ ಹಿರಿಯ ನಾಯಕರ ಒಂದು ಬಣ ಈಗಾಗಲೇ ತನ್ನ ಅಸಹನೆಯನ್ನು ಹೈಕಮಾಂಡ್ ಮುಂದೆ ತೋಡಿಕೊಂಡಿದ್ದು, ಅಭಿವೃದ್ಧಿ ಅಜೆಂಡಾದಿಂದ ದೂರ ಸರಿದು ಜಾತಿ ರಾಜಕೀಯಕ್ಕೆ ಅನುವು ಮಾಡಿ ಕೊಟ್ಟರೆ ಅದು ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣವಾಗಬಹುದು ಎಂದು ಎಚ್ಚರಿಸಿದೆ.

ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡದಂತೆ ಪಕ್ಷ ಈಗಾಗಲೇ ಮುಖ್ಯಮಂತ್ರಿಗೆ ತಿಳಿಸಿದ್ದರೆ, ಹೈಕಮಾಂಡ್ ಕೂಡ ಲಿಂಗಾಯತ-ವೀರಶೈವ ವಿವಾದಕ್ಕೆ ಹೆಚ್ಚಿನ ಮಹತ್ವ ನೀಡದಂತೆ ಎಚ್ಚರಿಸಿದೆಯೆಂದು ಹಿರಿಯ ನಾಯಕರೊಬ್ಬರು ಬಹಿರಂಗಪಡಿಸಿದ್ದಾರೆ.

ರಾಜ್ಯ ಸರಕಾರ ತನ್ನ ಹಲವು ಭಾಗ್ಯ ಯೋಜನೆಗಳು ಹಾಗೂ ಬಡವರ ಪರ ನಿಲುವಿನಿಂದ ಸಾಕಷ್ಟು ಜನಪ್ರಿಯವಾಗಿತ್ತಾದರೂ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ತಾನು ಸಿದ್ಧವಿರುವುದಾಗಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿಕೊಂಡಿರುವುದು ಸರಕಾರದ ವರ್ಚಸ್ಸನ್ನು ಕುಗ್ಗಿಸಿದೆ ಎಂದೇ ಹೇಳಲಾಗುತ್ತಿದೆ.

“ಕಾಂಗ್ರೆಸ್ ಯಾವತ್ತೂ ಯಾವುದೇ ಧರ್ಮ ಯಾ ಪಕ್ಷದೊಂದಿಗೆ ತನ್ನನ್ನು ಗುರುತಿಸಿಕೊಂಡಿಲ್ಲ. ಲಿಂಗಾಯತರು ತನ್ನನ್ನು ಬೆಂಬಲಿಸುತ್ತಾರೆಂದು ಬಿಜೆಪಿ ಹೇಳುತ್ತಾ ಬಂದಿದ್ದರೂ ನಮ್ಮ ಪಕ್ಷದಿಂದಲೂ ಹಲವು ಲಿಂಗಾಯತರು ಗೆದ್ದು ಬಂದಿದ್ದಾರೆ” ಎಂದು ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.