ಕೊಯ್ಯೂರು ಉಣ್ಣಾಲು ಪರಿಸರದಲ್ಲಿ ವಿದ್ಯುತ್ ಅವಘಡ ; ಹಲವು ಮನೆಗಳಲ್ಲಿ ಅಪಾರ ನಷ್ಟ

ಪ್ರಾಣಪಾಯದಿಂದ ಪಾರಾದ ಮದರಸದ ಮಕ್ಕಳು, ಆತಂಕದಲ್ಲಿ ಸ್ಥಳೀಯರು

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಲೈನ್ ಅಳವಡಿಸುವ ಕಾರ್ಯ ಮುಗಿಸಿದ ಬೆನ್ನಲ್ಲೇ ವಿಪರೀತ ಹೈ ವೋಲ್ಟೇಜಿನಿಂದಾಗಿ ಮಸೀದಿ ಹಾಗೂ ಮದರಸವೊಂದರ ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿ ಇನ್ನೊಂದೆಡೆ  ಸುಮಾರು 15ಕ್ಕೂ ಅಧಿಕ ಮನೆಗಳಲ್ಲಿ  ಕಟ್ಟಡಗಳ ವಿದ್ಯುತ್ ಸಂಪರ್ಕಗಳು, ಉಪಕರಣಗಳು ಸುಟ್ಟು ಕರಕಲಾದ ವಿದ್ಯಮಾನ ಕೊಯ್ಯೂರು ಗ್ರಾಮದಲ್ಲಿ ಸಂಭವಿಸಿದ್ದು ಮಸೀದಿಯ ಬಳಿಯ ಮದರಸದಲ್ಲಿದ್ದ ಮಕ್ಕಳು ಪವಾಡ ಸದೃಶ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಕೊಯ್ಯೂರು ಗ್ರಾಮದ ಉಣ್ಣಾಲು ಎಂಬ ಪರಿಸರದಲ್ಲಿ ಮಧ್ಯಾಹ್ನ ಏಕಾಏಕಿ ಮಾಮೂಲಿಗಿಂತ ಹೆಚ್ಚಿನ ವಿದ್ಯುತ್ ಪ್ರವಾಹ ತಂತಿಗಳಲ್ಲಿ ಹರಿದಾಡಿದ ಪರಿಣಾಮ ಉಣ್ಣಾಲು ಮಸೀದಿ, ಮದರಸ, ಅಕ್ಕಪಕ್ಕದ ಮನೆಗಳ ವಯರಿಂಗ್, ಇನ್ವರ್ಟ್‍ರ್ ಸೇರಿದಂತೆ ಹಲವಾರು ಉಪಕರಣಗಳು ಸುಟ್ಟು ಭಸ್ಮವಾಗಿವೆ. ವಯರಿಂಗ್ ಸುಟ್ಟು ಅದರ ಪ್ಲಾಸ್ಟಿಕ್ ದ್ರವವಾಗಿರುವುದು ಕಂಡು ಬಂದಿದೆ.

ವಿದ್ಯುತ್ ಅವಘಡದಲ್ಲಿ ಸ್ಥಳೀಯ ಇಸ್ಮಾಯಿಲ್, ಜಲೀಲ್, ಮಹಮ್ಮದ್ ಯುಕೆ, ಬಶೀರ್, ಲತೀಫ್, ಹೈದರ್, ಅಣ್ಣಿ ಗೌಡ ಎಂಬವರ ಮನೆಗಳೂ ಸೇರಿದಂತೆ ಸುಮಾರು 15 ಮನೆಗಳ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿದ್ದು ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

ವಿದ್ಯುತ್ ಅವಘಡದಲ್ಲಿ ಸ್ಥಳೀಯವಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಸುತ್ತಲಿನ ನಾಗರಿಕರಿಗೆ, ಮಕ್ಕಳಿಗೆ ಈ ಘಟನೆ ತೀವ್ರ ಆಘಾತ ಉಂಟಾಗಿದ್ದರೂ ಎಲ್ಲರೂ ಅಪಾಯದಿಂದ ಪಾರಾಗಿದ್ದು  ಸ್ಥಳೀಯ ನಿವಾಸಿಗಳಲ್ಲಿ ಜನರಲ್ಲಿ ಆತಂಕ ಸೃಷ್ಟಿಸಿದೆ.

ಪರಿಸರದಲ್ಲಿ ಒಂದೆಡೆ ಕೊಳವೆಬಾವಿಯ ಪಂಪ್ ಸೆಟ್ ವಿದ್ಯುತ್ ಸಂಪರ್ಕ ನೀಡುವ ಹಂತದಲ್ಲಿ ವ್ಯತ್ಯಯವುಂಟಾಗಿ ಈ ವಿದ್ಯಮಾನ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.