`ಅವಳ ಫೋನ್ ಮುಟ್ಟಲೂ ಬಿಡಲ್ಲ’

ಬಿಡುವುದಿಲ್ಲ ಅಂದರೆ ಅವಳಿಗೆ ನಿಮ್ಮಿಂದ ಮುಚ್ಚಿಡುವ ವಿಷಯ ಯಾವುದೋ ಇದೆ ಅಂತಾಯಿತು.

ಪ್ರ : ನಮ್ಮ ಆಫೀಸ್ ಕಲೀಗ್ ಜೊತೆ ಎರಡು ವರ್ಷದಿಂದ ಪ್ರೇಮಸಂಬಂಧ ಹೊಂದಿದ್ದೇನೆ. ನಾವಿಬ್ಬರೂ ಸಾಕಷ್ಟು ಸಮಯ ಜೊತೆಯಲ್ಲೇ ಕಳೆಯುತ್ತೇವೆ. ಸ್ವಲ್ಪ ಸಮಯದಲ್ಲಿ ಮದುವೆಯಾಗಲೂ ಆಲೋಚಿ ಸುತ್ತಿದ್ದೇವೆ. ಅವಳ ಒಂದೇ ಒಂದು ಗುಣ ನನಗಿಷ್ಟವಿಲ್ಲದ್ದು ಅಂದರೆ ಅವಳು ಕೆಲವು ವಿಷಯಗಳನ್ನು ನನ್ನಿಂದ ಮುಚ್ಚಿಡುತ್ತಿರುವುದು. ಅವಳಿಗೆ ನನಗಿಂತ ಮೊದಲು ಕೆಲವು ಸಮಯ ಒಬ್ಬ ಬಾಯ್‍ಫ್ರೆಂಡ್ ಇದ್ದಿದ್ದು ನನಗೆ ಗೊತ್ತಿದೆ. ನಾನು ಅದರ ಬಗ್ಗೆ ತಲೆಕಡಿಸಿಕೊಂಡಿಲ್ಲ ಅಂತ ಅವಳಿಗೂ ಗೊತ್ತು. ನಾನು ನನ್ನ ಕಾಲೇಜು ದಿನಗಳ ಕ್ರಶ್‍ನಿಂದ ಹಿಡಿದು ಎಲ್ಲ ವಿಷಯಗಳನ್ನೂ ಅವಳಿಗೆ ಹೇಳಿದ್ದೆ. ಆದರೆ ಅವಳು ಮಾತ್ರ ತನ್ನ ಹಿಂದಿನ ಜೀವನದ ಬಗ್ಗೆ ಕೇಳಿದರೂ ಹೇಳುವುದಿಲ್ಲ. ಸ್ವಲ್ಪ ಒತ್ತಾಯಿಸಿದರೂ ಕಿರಿಕಿರಿ ಯಾದವರಂತೆ ವರ್ತಿಸುತ್ತಾಳೆ. ಅವಳಿಗೇಕೆ ಇರಿಟೇಟ್ ಮಾಡುವುದೆಂದು ನಾನು ಅವಳ ಹಿಂದಿನದ್ದನ್ನು ಕೆದಕಬಾರದೆಂದು ನಿರ್ಧರಿಸಿದೆ. ಆದರೆ ಅವಳು ಈಗಲೂ ನನ್ನ ಹತ್ತಿರ ಎಲ್ಲ ವಿಷಯ ಬಿಚ್ಚು ಮನಸ್ಸಿನಿಂದ ಹಂಚಿಕೊಳ್ಳುತ್ತಿಲ್ಲ. ಅವಳ ಸೆಲ್‍ಫೋನನ್ನು ಮುಟ್ಟಲೂ ಬಿಡುವುದಿಲ್ಲ. ಒಮ್ಮೆ ಹೊಟೇಲಿಗೆ ಹೋದಾಗ ಅವಳು ಸೆಲ್‍ನ್ನು ಟೇಬಲ್ಲಿನಲ್ಲೇ ಇಟ್ಟು ವಾಶ್‍ರೂಮಿಗೆ ಹೋಗಿದ್ದಳು. ಅವಳ ಫೋನ್ ರಿಂಗಣಿಸಿದಾಗ ನಾನು ರಿಸೀವ್ ಮಾಡಲು ಹೋದೆ. ಅಷ್ಟರಲ್ಲಿ ಬಂದ ಅವಳು ಫೊನ್ ನನ್ನಿಂದ ಕಸಿದುಕೊಂಡು ನನ್ನ ಮೇಲೆ ತುಂಬಾ ರೇಗಾಡಿಬಿಟ್ಟಳು. ನನಗೆ ಬೇಸರವಾದರೂ ಅವಳನ್ನು ನಾನು ಪ್ರೀತಿಸುತ್ತಿರುವುದರಿಂದ ಹೆಚ್ಚು ಫಸ್ ಮಾಡಿಲ್ಲ. ಯಾಕೆ ಅವಳು ಹೀಗಾಡುತ್ತಿರಬಹುದು?

: ನೀವು ಆ ಹುಡುಗಿಯ ಬಗ್ಗೆ ಎಲ್ಲ ವಿಷಯ ತಿಳಿದುಕೊಂಡಿಲ್ಲ ಅಂತ ಕಾಣುತ್ತದೆ. ಅವಳಿಗೆ ಮೊದಲೊಬ್ಬ ಬಾಯ್‍ಫ್ರೆಂಡ್ ಇದ್ದಿದ್ದು ಗೊತ್ತಾಗಿಯೂ ನೀವು ಅವಳನ್ನು ಲವ್ ಮಾಡಿದಿರಿ. ನೀವು ಅವಳ ಹತ್ತಿರ ನಿಮ್ಮೆಲ್ಲ ವಿಷಯಗಳನ್ನೂ ಹೇಳಿಕೊಳ್ಳುತ್ತಿದ್ದರೂ ಅವಳು ಇನ್ನೂ ನಿಮ್ಮ ಹತ್ತಿರ ಮನಬಿಚ್ಚಿ ಎಲ್ಲ ಹಂಚಿಕೊಳ್ಳದಿರುವುದು ನೋಡಿದರೆ ಅವಳು ಸ್ವಲ್ಪ ನಿಗೂಢ ವ್ಯಕ್ತಿ ಅಂತಲೇ ಅನಿಸುತ್ತದೆ. ಮದುವೆಯಾಗುವ ಹುಡುಗನ ಜೊತೆ ಪ್ರಾಮಾಣಿಕತೆ ಇಲ್ಲದಿದ್ದರೆ ಆ ಸಂಬಂಧ ಗಟ್ಟಿಗೊಳ್ಳುವುದು ಕಷ್ಟ. ಅವಳು ಸೆಲ್‍ಫೋನನ್ನು ಮುಟ್ಟಲೂ ಬಿಡುವುದಿಲ್ಲ ಅಂದರೆ ಅವಳಿಗೆ ನಿಮ್ಮಿಂದ ಮುಚ್ಚಿಡುವ ವಿಷಯ ಯಾವುದೋ ಇದೆ ಅಂತಾಯಿತು. ಒಂದೇ ಅವಳ ಸೆಲ್‍ಫೋನಿನಲ್ಲಿ ನಿಮಗೆ ಹೇಳಬಾರದಂತಹ ವ್ಯಕ್ತಿಯ ಕಾಂಟೇಕ್ಟ್ ಡಿಟೈಲ್ಸ್ ಇರಬಹುದು ಇಲ್ಲಾ ನಿಮಗೆ ತೋರಿಸಲಾಗದಂತಹ ಫೋಟೋ ಕ್ಲಿಪ್ಪಿಂಗ್ಸ್ ಇರಬಹುದು. ಸಂಗಾತಿಗಳ ನಡುವೆ ಸ್ವಲ್ಪ ಮಟ್ಟಿನ ಪ್ರೈವೆಸಿ ಇರಬಹುದಾದರೂ ಪಾರದರ್ಶಕತೆ ಇಲ್ಲದಿದ್ದರೆ ಸಂಶಯಕ್ಕೆ ಅದು ಎಡೆಮಾಡಿಕೊಡುತ್ತದೆ. ನೀವೊಮ್ಮೆ ಅವಳ ಈ ರೀತಿಯ ನಡೆಯ ಬಗ್ಗೆ ನಿಮಗೆ ಬೇಸರವಿದೆಯೆಂತಲೂ, ನಿಮ್ಮಿಬ್ಬರ ಮಧ್ಯೆ ಯಾವ ರಹಸ್ಯ ಇರುವುದನ್ನೂ ನೀವು ಸಹಿಸುವುದಿಲ್ಲ ಅಂತ ಈಗಲೇ ಮುಕ್ತವಾಗಿ ಅವಳ ಹತ್ತಿರ ಮಾತಾಡಿ. ಮುಂದಿನ ಹಂತಕ್ಕೆ ನಿಮ್ಮ ಸಂಬಂಧವನ್ನು ಕೊಂಡೊಯ್ಯುವ ಮೊದಲೇ ಎಲ್ಲ ವಿಷಯ ಇತ್ಯರ್ಥ ಮಾಡಿಕೊಳ್ಳದಿದ್ದರೆ ಮುಂದೆ ಪರಿತಪಿಸಬೇಕಾದೀತು.