`ಶಕುಂತಳಾ ಶೆಟ್ಟಿಗೆ ಅವಕಾಶ ನೀಡಿದರೆ ಸೋಲು ಖಚಿತ’

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : “ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶಕುಂತಳಾ ಶೆಟ್ಟಿಗೆ ಅವಕಾಶ ನೀಡಿದರೆ ಸೋಲುವುದು ಖಚಿತ” ಎಂದು ಕಾಂಗ್ರೆಸ್ ಮುಖಂಡ ಪುತ್ತೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಹೇಮನಾಥ ಶೆಟ್ಟಿ ಕಾವು ಭವಿಷ್ಯ ನುಡಿದಿದ್ದಾರೆ.

ರವಿವಾರ ರಾತ್ರಿ ಬಂಟ್ವಾಳದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿದ್ದ ವೇಳೆ `ಕರಾವಳಿ ಅಲೆ’ಯೊಂದಿಗೆ ಮಾತನಾಡಿದ ಅವರು, “ಶಕುಂತಳಾ ಶೆಟ್ಟಿ ಕೇವಲ ಅವಕಾಶಕ್ಕಾಗಿ ಮಾತ್ರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆಯೇ ವಿನಃ ಇನ್ನೂ ಅವರಲ್ಲಿ ಕಾಂಗ್ರೆಸ್ ಪರ ಒಲವು ಬಂದಿಲ್ಲ. ಸ್ವತಃ ಕಾಂಗ್ರೆಸ್ ಕಚೇರಿಯನ್ನೇ ರಾಮಭಟ್ ಅವರ ಮೂಲಕ ಉದ್ಘಾಟಿಸಿ ಎಲ್ಲ ಸ್ಥರದ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಿರುವ ಶಕುಂತಳಾ ಶೆಟ್ಟಿ, ಕಾಂಗ್ರೆಸ್ ನಾಯಕರನ್ನಾಗಲಿ, ಕಾರ್ಯಕರ್ತರನ್ನಾಗಲಿ ವಿಶ್ವಾಸಕ್ಕೆ ಪಡೆದುಕೊಳ್ಳುವ ಕೆಲಸ ಮಾಡಿಲ್ಲ” ಎಂದು ಆರೋಪಿಸಿದರು.

“ಪುತ್ತೂರು ಕ್ಷೇತ್ರದ ಅಭ್ಯರ್ಥಿಯನ್ನು ಈ ಬಾರಿ ಬದಲಾಯಿಸಲೇಬೇಕು. ಅದಕ್ಕಾಗಿ ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಈಗಾಗಲೇ ಪುತ್ತೂರು ತಾಲೂಕಿನ ಏಕೈಕ ಜಿಲ್ಲಾ ಪಂಚಾಯತ ಸದಸ್ಯೆ ನನ್ನ ಪತ್ನಿಯಾಗಿದ್ದು, ಪುತ್ತೂರು ತಾ ಪಂ.ನ ಕಾಂಗ್ರೆಸ್ ಸದಸ್ಯರು, ಪುರಸಭೆಯ ಎಲ್ಲ ಕಾಂಗ್ರೆಸ್ ಸದಸ್ಯರೂ ನನ್ನೊಂದಿಗಿದ್ದಾರೆ. ಪುತ್ತೂರು ತಾಲೂಕಿನ ಸುಮಾರು 16ರಷ್ಟು ಹಿಂದೂ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳು ನನ್ನದೇ ನೇತೃತ್ವದಲ್ಲಿ ನಡೆಯುತ್ತಿದೆ. ಬಹುಸಂಖ್ಯಾತರ ಸಹಿತ ಅಲ್ಪಸಂಖ್ಯಾರೂ ನನ್ನೊಂದಿಗಿದ್ದು, ಸಮಾಜದ ಇನ್ನಿತರ ವರ್ಗದ ಮಂದಿಯನ್ನೂ ಕೂಡಾ ನಾನು ಸಂಪೂರ್ಣ ವಿಶ್ವಾಸಕ್ಕೆ ಪಡೆದುಕೊಂಡಿದ್ದೇನೆ. ಅಲ್ಲದೆ ಕಾಂಗ್ರೆಸ್ ಹಿಂದೂ ವಿರೋಧಿ, ಅಲ್ಪಸಂಖ್ಯಾತ ತುಷ್ಠೀಕರಣ ಎಂಬ ಅಪವಾದ ತೊಡೆದು ಹಾಕಲು 2014ರಲ್ಲಿ ನನ್ನ ನೇತೃತ್ವದಲ್ಲಿ ಪುತ್ತೂರಿನಲ್ಲಿ ಹಿಂದೂ ಪರಿಷತ್ ಸ್ಥಾಪಿಸಿದ್ದು, ಇಂದು ಇದೇ ಮಾದರಿಯಲ್ಲಿ ರಾಹುಲ್ ಗಾಂಧಿ ಕಾರ್ಯಯೋಜನೆ ರೂಪಿಸಿದ್ದಾರೆ. ಇದುವೇ ನನ್ನ ಆಕಾಂಕ್ಷಿತ್ವಕ್ಕೆ ಪಕ್ಷದ ವರಿಷ್ಠರಿಗೆ ನೀಡುತ್ತಿರುವ ಅರ್ಹತೆಯ ಪಟ್ಟಿ” ಎಂದು ಹೇಳಿಕೊಂಡರು.

“ಈಗಾಗಲೇ ಪುತ್ತೂರು ಕ್ಷೇತ್ರಾದ್ಯಂತ ಸರ್ವೆ ಕೈಗೊಳ್ಳಲಾಗಿದ್ದು, ಕ್ಷೇತ್ರದ ಜನ ಶಕುಂತಳಾ ಶೆಟ್ಟಿ ಕಾರ್ಯವೈಖರಿಯಿಂದ ಮಾರುದ್ದ ಅಂತರ ಕಾಯ್ದುಕೊಂಡಿದ್ದಾರೆ. ಒಂದು ವೇಳೆ ಪಕ್ಷದ ವರಿಷ್ಠರು ಕೊನೆ ಕ್ಷಣದಲ್ಲಿ ಶಕುಂತಳಾ ಶೆಟ್ಟಿ ಅವರನ್ನೇ ಅಭ್ಯರ್ಥಿಯಾಗಿ ನೆಚ್ಚಿಕೊಂಡರೆ ನಾನು ಹಾಗೂ ನನ್ನ ಅಭಿಮಾನಿಗಳು ತಟಸ್ಥ ನಿಲುವು ತಳೆಯಲಿದ್ದೇವೆ. ಆದರೆ ಪಕ್ಷವಿರೋಧಿ ಚಟುವಟಿಕೆ ಈ ಹಿಂದೆಯೂ ನಡೆಸಿಲ್ಲ. ಇನ್ನು ಮುಂದೆಯೂ ನಡೆಸುವುದಿಲ್ಲ” ಎಂದು ಸಾರಿದರು.

LEAVE A REPLY