ಸ್ವಯಂಪ್ರೇರಿತ ದಂಡ ಕಟ್ಟಿದ ಪ್ರಮೋದ್

ಹೆಲ್ಮೆಟ್‍ರಹಿತ ಚಾಲನೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಹೆಲ್ಮೆಟ್ ಧರಿಸದೇ ಬೈಕ್ ಪ್ರಯಾಣ ಮಾಡಿದ್ದ ಕಾರಣಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ, ಯುವಜನ ಮತ್ತು ಖಾತೆ ಕ್ರೀಡಾ ಖಾತೆ ಸಚಿವ ಪ್ರಮೋದ್ ಮಧ್ವರಾಜ್ ಸ್ವಯಂಪ್ರೇರಿತರಾಗಿ 100 ರೂಪಾಯಿ ದಂಡ ಪಾವತಿಸಿದ್ದಾರೆ.

ಕೆಂಜೂರು ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಸಚಿವರು ಆಗಮಿಸಿದ್ದ ವೇಳೆ ಬಿಡುವಿನ ಅವಧಿಯಲ್ಲಿ ಅಲ್ಲೇ ಇದ್ದ ಬೈಕಿನಲ್ಲಿ ಹೆಲ್ಮೆಟ್ ಧರಿಸದೇ ಜಾಲಿ ರೈಡ್ ಮಾಡಿದ್ದರು. ಅವರು ಬೈಕ್ ರೈಡ್ ಮಾಡಿದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಾಕಷ್ಟು ಟೀಕೆಗೆಳು ವ್ಯಕ್ತವಾಗಿದ್ದವು.ಈ ವಿರೋಧದ ಹಿನ್ನೆಲೆಯಲ್ಲಿ ಅವರು ದಂಡವನ್ನು ಪಾವತಿಸಿದ್ದಾರೆ.

ಸಾರ್ವಜನಿಕರ ಅಹವಾಲು ಆಲಿಸುವ ಫೋನ್ ಇನ್ ಕಾರ್ಯಕ್ರಮದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸಂಜೀವ ಪಾಟೀಲ್, ಸಚಿವ ಪ್ರಮೋದ್ ಮಧ್ವರಾಜ್ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿ ಕಾನೂನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ನವೆಂಬರ್ 10ರಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ 100 ರೂಪಾಯಿ ದಂಡವನ್ನು ಪಾವತಿಸಿದ್ದಾರೆ ಎಂದು ಹೇಳಿದರು. ಅವರು ಕಾನೂನು ಪಾಲನೆ ಮಾಡಿದ ಓರ್ವ ಸಾಮಾನ್ಯ ನಾಗರಿಕ ಎಂದು ಬಣ್ಣಿಸಿದ್ದಾರೆ.