ಮುಂಬೈ : ಹೆಲಿಕಾಪ್ಟರ್ ಪತನ, ಪೈಲಟ್ ಸಾವು

ಮುಂಬೈ : ನಿನ್ನೆ ಮಧ್ಯಾಹ್ನದ ಹೊತ್ತಿಗೆ ಗೋರೆಗಾಂವಿನ ಆರೇ ಕಾಲೊನಿಯ ಫಿಲ್ಟರ್ ಪಾಡಾ ಪ್ರದೇಶದಲ್ಲಿ ಹೆಲಿಕಾಪ್ಟರೊಂದು ಪತನಗೊಡು ಒಬ್ಬ ಪೈಲೆಟ್ ಮೃತಪಟ್ಟಿದ್ದು, ಇತರ ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಹೆಲಿಕಾಪ್ಟರಿನಲ್ಲಿದ್ದ ನಾಲ್ವರು ಸಿಬ್ಬಂದಿಯಲ್ಲಿ ಪೈಲೆಟ್ ಪ್ರಫುಲ್ ಕುಮಾರ್ ಮಿಶ್ರ (55) ಮತ್ತು ಇಂಜಿನಿಯರರೊಬ್ಬರು ತೀವ್ರ ಸುಟ್ಟ ಗಾಯಗೊಂಡಿದ್ದು, ಮಿಶ್ರಾ ಆಸ್ಪತ್ರೆಯಲ್ಲಿ ಅಸುನೀಗಿದರು.

ಈ ಹೆಲಿಕಾಪ್ಟರ್ ಜುಹು ಏರೋಡ್ರೋಮಿನಿಂದ ಬೆಳಿಗ್ಗೆ 11.52ಕ್ಕೆ ಹಾರಾಟ ನಡೆಸಿತ್ತು. 11.56ಕ್ಕೆ ಹೆಲಿಕಾಪ್ಟರಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ ಎಂದು ಜುಹು ಏರ್ ಟ್ರಾಫಿಕ್ ನಿಯಂತ್ರಣ ಕೊಠಡಿಗೆ ಪೈಲೆಟ್ ಸಂದೇಶ ರವಾನಿಸಿದ್ದರು. ಇದಾದ 10 ಸೆಕಂಡಿನಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಇದು ಗೋರೆಗಾಂವ್ ಫಿಲ್ಮ್ ಸಿಟಿಯ ಮೇಲೆ ಒಂದು ಸುತ್ತು ಬಂದಿದ್ದು, ಇನ್ನೊಂದು ಸುತ್ತು ಹೊಡೆಯುವಾಗ ಪತನಗೊಂಡಿದೆ ಎಂದು ಜುಹು ಮೂಲಗಳು ಹೇಳಿವೆ.

ಹೆಲಿಕಾಪ್ಟರ್ ಪತನಗೊಂಡ ಸ್ಥಳಕ್ಕೆ ಭಾರೀ ಸಂಖ್ಯೆಯ ಜನರು ಆಗಮಿಸಿ, ಸೀಟು ಬೆಲ್ಟ್ ಕತ್ತರಿಸಿ ಸಿಬ್ಬಂದಿಯ ಪಾರು ಮಾಡಲು ಪ್ರಯತ್ನಿಸಿದ್ದಾರೆ. ಎಲ್ಲರನ್ನೂ ಸ್ಥಳೀಯರಿಗೆ ಹೊರಗೆಳೆದು ಆಸ್ಪತ್ರೆಗೆ ಸಾಗಿಸಿದ್ದಾರೆ.