ಹೆಲಿ ಪ್ರವಾಸೋದ್ಯಮ ಟೇಕಾಫಿಗೆ ವಿಫಲ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜಿಲ್ಲಾ ಪ್ರವಾಸೋದ್ಯಮ ಸಾಮಥ್ರ್ಯ ಅಭಿವೃದ್ಧಿಪಡಿಸುವ ಉದ್ದೇಶವನ್ನಿಟ್ಟುಕೊಂಡು ಜಾರಿಗೊಳಿಸಲಾದ ಮಹಾತ್ವಾಕಾಂಕ್ಷಿ `ಹೆಲಿ’ ಪ್ರವಾಸೋದ್ಯಮ ಪ್ಯಾಕೇಜ್ 9 ತಿಂಗಳ ಬಳಿಕವೂ ಟೇಕಾಫ್ ಪಡೆಯುವಲ್ಲಿ ವಿಫಲವಾಗಿದೆ. ಪ್ರಾರಂಭದಲ್ಲಿ ಈ ಸೇವೆಯನ್ನು ಎರಡು ವಾರಕ್ಕೊಮ್ಮೆ ಲಭ್ಯವಿರುವಂತೆ ಜಾರಿಗೊಳಿಸಿ ಕ್ರಮೇಣ ಪ್ಯಾಕೇಜ್ ಯಶಸ್ವಿ ಬಳಿಕ ಸೇವೆಯನ್ನು ವಿಸ್ತರಿಸುವ ಚಿಂತನೆ ಮಾಡಲಾಗಿತ್ತು.

ಈ ಪ್ಯಾಕೇಜಿಗೆ ಮಾಜಿ ಜಿಲ್ಲಾಧಿಕಾರಿ ಆರ್ ವಿಶಾಲ್ ಚಾಲನೆ ನೀಡಿದ್ದರು. ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ಆದಿ ಉಡುಪಿಯಲ್ಲಿ ಈ ಸೌಲಭ್ಯವನ್ನು ಆರಂಭಿಸಲಾಯಿತು. ದೆಹಲಿ ಮೂಲದ ಚಿಪ್ಸಾನ್ ಏವಿಯೇಷನ್ ಕಂಪೆನಿಯು ಹೆಲಿ ಪ್ರವಾಸೋದ್ಯಮ ಸೇವೆ ನೀಡಲು ಜಿಲ್ಲಾಡಳಿತದಿಂದ ಅನುಮತಿ ಪಡೆಯಿತು ಮತ್ತು ಪ್ರತಿ ವಾರ ಅಥವಾ 10 ದಿನಗಳಿಗೊಂದು ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಬೇಕೆನ್ನುವ ಮನವಿಯನ್ನು ಸ್ವೀಕರಿಸಿತ್ತು. ಆದರೆ ಜಿಲ್ಲಾಧಿಕಾರಿ ವರ್ಗಾವಣೆ ಬಳಿಕ ಈ ಪ್ಯಾಕೇಜ್ ಕೂಡ ಕ್ಷೀಣವಾಯಿತು.

ಈ ಹೆಲಿ ಪ್ಯಾಕೇಜಿನ ಪ್ರಕಾರ ಪ್ರವಾಸಿಗರು ಉಡುಪಿ, ಮಣಿಪಾಲ ಮತ್ತು ಮಲ್ಪೆ ಸುತ್ತ ಕೇವಲ ತಲಾ 3,000 ರೂಪಾಯಿಗಳಲ್ಲಿ ರೈಡ್ ಮಾಡಬಹುದು. ವಿದ್ಯಾರ್ಥಿಗಳಿಗೆ ತಲಾ 400 ರೂಪಾಯಿಗಳಂತೆ ರಿಯಾಯಿತಿ ದರ ವಿಧಿಸಲಾಗಿದೆ. ಮಂಗಳೂರಿನಿಂದ ಉಡುಪಿ, ಉಡುಪಿಯಿಂದ ಕೊಲ್ಲೂರು ಅಥವಾ ಇತರ ಪ್ರದೇಶಗಳಿಗೆ ರೈಡ್ ಮಾಡಲು ಇಚ್ಚಿಸುವ ಪ್ರವಾಸಿಗರು 24 ಗಂಟೆಗಳಿಗೆ ಮುಂಚಿತವಾಗಿ ಚಿಪ್ಸಾನ್ ಏವಿಯೇಷನ್ನಿಗೆ ಮಾಹಿತಿ ನೀಡಬೇಕು. ಈ ಸೌಲಭ್ಯ ಗೋಕರ್ಣ ಮತ್ತು ಮುರ್ಡೇಶ್ವರ ಪ್ರಯಾಣಿಸುವ ಪ್ರವಾಸಿಗರಿಗೂ ಲಭ್ಯವಿದೆ. ಈ ಹೆಲಿಕಾಪ್ಟರ್ ಪೈಲೆಟ್ ಹೊರತುಪಡಿಸಿ ಗರಿಷ್ಟ ಆರು ಮಂದಿಯನ್ನು ಹೊತ್ತೊಯ್ಯಬಹುದಾಗಿದೆ.

ವೆಚ್ಚದ ನಿರ್ವಹಣೆ ಮತ್ತು ಜಿಲ್ಲಾಡಳಿತದ ಉತ್ತೇಜನದ ಕೊರತೆಯಿಂದಾಗಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ವಜಾ ಮಾಡಲಾಗಿದೆ ಎಂದು ಹೆಲಿ ಟೂರಿಸಮ್ ಪ್ಯಾಕೇಜ್ ಸಹ ಸಂಯೋಜಕ ಸುದೇಶ್ ಶೆಟ್ಟಿ ಹೇಳಿದ್ದಾರೆ.