`ಅಡಿಕೆಯ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ಅಗತ್ಯ’

ನಮ್ಮ ಪ್ರತಿನಿಧಿ ವರದಿ

ಉಜಿರೆ : “ಅಡಿಕೆ ಬೆಳೆಗಾರರು ಅಡಿಕೆ ಬೆಲೆಯ ಅಸ್ಥಿರತೆಯಿಂದ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಇದೇ ವೇಳೆ ಅಡಿಕೆಯ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆಸುವುದು ಅಗತ್ಯವಾಗಿದೆ” ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಅವರು ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜು, ಅಡಿಕೆ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ ಮತ್ತು ಕ್ಯಾಂಪ್ಕೋ ನಗರದಲ್ಲಿ ಆಯೋಜಿಸಿದ್ದ `ಅಡಿಕೆಯಲ್ಲಿ ಉದ್ಯಮ ಅಭಿವೃದ್ದಿ ಮತ್ತು ಕೈಗಾರಿಕಾ ಅವಕಾಶಗಳು” ಎಂಬ ವಿಷಯದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ “ವಾರಣಾಸಿ ಸುಬ್ರಾಯ ಭಟ್ಟರು ಈ ಪ್ರದೇಶದ ಅಡಿಕೆ ಬೆಳೆಗಾರರನ್ನು ರಕ್ಷಿಸುವ ಉದ್ದೇಶದಿಂದ ಕ್ಯಾಂಪ್ಕೋ ಪ್ರಾರಂಭಿಸಿದ್ದಾರೆ. ಇದೀಗ ಇದೇ ಸಂಸ್ಥೆ ಅಡಿಕೆಯ ವೈದ್ಯಕೀಯ ಗುಣಗಳ ಬಗ್ಗೆಯೂ ಸಂಶೋಧನೆ ನಡೆಸಬೇಕಾಗಿದೆ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಸ್ವಾವಲಂಬಿಗಳಾಗಲು ಕರೆ

“ವಿದ್ಯಾರ್ಥಿಗಳು ಅಡಿಕೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಬೇಕು” ಎಂದು ವೀರೇಂದ್ರ ಹೆಗ್ಗಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

“ಅಡಿಕೆಗೆ ಮೌಲ್ಯ ಹೆಚ್ಚಳ ಮತ್ತು ಅದರ ಮಾರುಕಟ್ಟೆ ಹೆಚ್ಚಿನ ಲಾಭ ಗಳಿಕೆಗೆ ಸಹಾಯವಾಗಲಿದೆ. ಅಡಿಕೆಯಲ್ಲಿ ಆರೋಗ್ಯ ಮತ್ತು ಔಷಧೀಯ ಲಾಭಗಳಿವೆ” ಎಂದು ಸಿಪಿಸಿಆರೈ ನಿರ್ದೇಶಕ ಡಾ ಪಿ ಚೌಡಪ್ಪ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಉಪಸ್ಥಿತರಿದ್ದರು.