ಹೆಗ್ಗಡೆ ಕುಟಂಬದ ಭೂಕಬಳಿಕೆ ಪ್ರಕರಣ ವಿಚಾರಣೆ ಪುತ್ತೂರು ಎ ಸಿ ಕೋರ್ಟಲ್ಲಿ ನ 22ರಿಂದ

ಮಂಗಳೂರು : ಭೂ ಸುಧಾರಣಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಕೃಷಿ ಭೂಮಿ ಹೊಂದಿದ ಬಗ್ಗೆ ಸಾಕ್ಷಾಧಾರ ಸಹಿತ ರಂಜನ್ ರಾವ್ ಯರ್ಡೂರ್ ನೀಡಿದ ದೂರಿನ ತನಿಖೆ ಬಗ್ಗೆ ಹರ್ಷೇಂದ್ರ, ಹೇಮಾವತಿ ಹೆಗ್ಗಡೆ, ಎಸ್ ಪ್ರಭಾಕರ್, ಬಿ ಯಶೋವರ್ಮ,  ಶ್ರದ್ಧಾ, ಸರೋಜಿನಿ ಪ್ರಭಾಕರ್, ಸೋನಿಯ ಯಶೋವರ್ಮ, ಎಸ್ ಡಿ ಎಂ ಎಜ್ಯುಕೇಶನಲ್ ಸೊಸೈಟಿ ಮತ್ತಿತರರಿಗೆ ಪುತ್ತೂರು ಸಹಾಯಕ ಆಯುಕ್ತರು ನೋಟಿಸು ಕೊಟ್ಟಿದ್ದಾರೆ. 12 ಪ್ರಕರಣಗಳ ತನಿಖೆ 22.11.16ರಿಂದ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಆರಂಭವಾಗಲಿದೆ.

ಹೆಗ್ಗಡೆ ಕುಟುಂಬ ಮತ್ತು ಸಂಸ್ಥೆಗಳಿಗೆ ಸಂಬಂಧಿಸಿ ನಾಪತ್ತೆಯಾದ ಕಡತಗಳ ಮಾಹಿತಿ ಅಲಭ್ಯದ ಕುರಿತು ಸಲ್ಲಿಸಿದ ಮೇಲ್ಮನವಿ ಪುರಸ್ಕರಿಸಿದ ಪುತ್ತೂರು ಎಸಿಯವರು 11 ಪ್ರಕರಣಗಳಲ್ಲಿ ಅಪೇಕ್ಷಿತ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆ ಪ್ರಕಾರ 30 ದಿನದೊಳಗೆ ನೀಡುವಂತೆ 25.10.2016ರಂದು ಬೆಳ್ತಂಗಡಿ ತಹಶೀಲ್ದಾರರಿಗೆ ಆದೇಶಿಸಿದ್ದಾರೆ. ಈ ತನಿಖೆ ಮತ್ತು ಮಾಹಿತಿಗಳಿಂದ ಹೆಗ್ಗಡೆ ಸಂಸ್ಥಾನದ ಬೃಹತ್ ಭೂಹಗರಣಗಳ ಇನ್ನೊಂದು ಅಧ್ಯಾಯವೇ ತೆರೆಯಲ್ಪಡಲಿದೆ ಎಂದು ಗುರುವಾಯನಕೆರೆ ಮೂಲದ ನಾಗರಿಕ ಸೇವಾ ಟ್ರಸ್ಟ್ ನೇತೃತ್ವದ ಜಂಟಿ ಕ್ರಿಯಾ ಸಮಿತಿ ಅಭಿಪ್ರಾಯಪಟ್ಟಿದೆ.