ಫುಟ್ಪಾತ್ ಆಕ್ರಮಿಸಿದ ಅಂಗಡಿಕಾರರ ವಿರುದ್ಧ ಹೆಬ್ರಿ ಪಾದಚಾರಿಗಳ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಹೆಬ್ರಿ ಪೇಟೆಯಲ್ಲಿ ದಿನೇದಿನೇ ವಾಹನದಟ್ಟನೆ ಜಾಸ್ತಿಯಾಗುತ್ತಿದ್ದು, ಹೆಬ್ರಿ ಪೇಟೆಗೆ ಹೊಂದಿಕೊಂಡ ರಸ್ತೆಯ ಇಕ್ಕೆಲಗಳಲ್ಲಿ ನೋಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಕೂಡಲೇ ನೋಟಿಫೀಕೇಶನ್ ಹೊರಡಿಸುವಂತೆ ಆಗ್ರಹಿಸಿ ಹೆಬ್ರಿಯ ನಾಗರಿಕರು ಹೆಬ್ರಿ ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ.

ಹೆಬ್ರಿಯ ಮೇಲ್ಪೇಟೆ ಹಾಗೂ ಕೆಳಪೇಟೆವರೆಗೆ ಅಂಗಡಿಗಳು ರಸ್ತೆವರೆಗೆಯಿದ್ದು, ಅಂಗಡಿಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆ ಹಾಗೂ ಫುಟ್ಪಾತುಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರು ತಿರುಗಾಡಲು ಫುಟ್ಪಾತುಗಳಿಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಾಹನಸವಾರರು ರಸ್ತೆಯಲ್ಲಿ ಸಂಚರಿಸಲು ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಹೆಬ್ರಿ ಪೇಟೆಯಲ್ಲಿ ವಾಹನದಟ್ಟನೆ ದಿನೇದಿನೇ ಜಾಸ್ತಿಯಾಗುತ್ತಿರುವುದರಿಂದ ಪಾದಚಾರಿಗಳು ನಡೆದು ಹೋಗುವ ದಾರಿಯನ್ನು ಅಂಗಡಿಯ ಮಾಲಕರು ಆಕ್ರಮಿಸಿಕೊಂಡಿದ್ದಾರೆ. ಅಂಗಡಿಗೆ ಬರುವ ಗ್ರಾಹಕರು ವಾಹನಗಳನ್ನು ರಸ್ತೆಯಲ್ಲೇ ಇಡುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಾಡಾಯಿಸಿದೆ ಎಂದು ನಾಗರಿಕರು ದೂರಿದ್ದಾರೆ. ಆದ್ದರಿಂದ ಹೆಬ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬ್ರಿ ಪೇಟೆಯ ಉಡುಪಿ-ಶಿವಮೊಗ್ಗ ಮುಖ್ಯ ರಸ್ತೆಯ ಮಾತಾ ಮತ್ತು ಜಲದುರ್ಗಾ ಫ್ಲವರ್ ಸ್ಟಾಲ್ ಅಂಗಡಿಯೆದರು, ನಮೃತಾ ಜುವೆಲ್ಲರಿ ಬಳಿ, ನಾಯಕ್ ರೆಸ್ಟೋರೆಂಟಿನೆದುರು ಹೆಬ್ರಿ ಬಸ್ ನಿಲ್ದಾಣದಲ್ಲಿರುವ ಗುರು ಮತ್ತು ಭಾವನಾ ಬೇಕರಿಯೆದರು, ವಾಹನಗಳನ್ನು ರಸ್ತೆ ಮತ್ತು ಫುಟ್ಪಾತುಗಳಲ್ಲಿಯೇ ನಿಲ್ಲಿಸುತ್ತಿರುವುದರಿಂದ ಜನ ಹಾಗೂ ವಾಹನ ಸಂಚಾರಕ್ಕೆ ತೀವ್ರ ಆಡಚಣೆಯಾಗುತ್ತಿದ್ದು, ಸಂಚಾರದಟ್ಟಣೆಯ ನಿಯಂತ್ರಣಕ್ಕಾಗಿ ಹೆಬ್ರಿ ಗ್ರಾಮ ಪಂಚಾಯತ್ ಕೂಡಲೇ ಈ ಸ್ಥಳಗಳನ್ನು ನೋಪಾರ್ಕಿಂಗ್ ಏರಿಯಾಗಳಾಗಿ ಗುರುತಿಸಿಕೊಂಡು ಈ ಬಗ್ಗೆ ಅಧಿಸೂಚನೆ ಹೊರಡಿಸಬೇಕೆಂದು ನಾಗರಿಕರು ಮನವಿಯಲ್ಲಿ ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.