ಬದಲಿ ವ್ಯವಸ್ಥೆ ಮಾಡದೇ ನೋಟ್ ರದ್ದು ಪ್ರಧಾನಿ ವಿರುದ್ಧ ಹೆಬ್ರಿ ಕಾಂಗ್ರೆಸ್ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳದೇ ಹಠಾತ್ತಾಗಿ ನೋಟು ರದ್ದುಗೊಳಿಸಿ ಬಡವರ ಬದುಕನ್ನು ದುರ್ಬರಗೊಳಿಸಿ ತಾನು ಭ್ರಷ್ಟಾಚಾರ ನಿರ್ಮೂಲನೆಗೊಳಿಸಲು ಈ ಕ್ರಮ ಕೈಗೊಂಡಿದ್ದೇನೆ ಎಂದು ಪ್ರಧಾನಿ ಮೋದಿ ಸುಳ್ಳು ಹೇಳಿದ್ದು ನೋಟು ರದ್ಧತಿಯಿಂದ ಬಿಜೆಪಿಗೆ ಮಾತ್ರ ಲಾಭವಾಗಿದೆ ಎಂದು ಮಾಜಿ ಶಾಸಕ ಗೋಪಾಲ ಭಂಡಾರಿ ಹೇಳಿದ್ದಾರೆ.

ಅವರು ಹೆಬ್ರಿಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಕೇಂದ್ರ ಸರ್ಕಾರದ ನೋಟು ರದ್ದತಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, “ಪ್ರಧಾನಿ ಮೋದಿಗೆ ಬಡಜನರ  ಕಷ್ಟ ಏನೆಂದು ಅರ್ಥವಾಗುತ್ತಿಲ್ಲ, ವಿದೇಶದಲ್ಲಿರುವ ಕಪ್ಪು ಹಣ ತಂದು ಜನಧನ್ ಖಾತೆಯ ಮೂಲಕ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಜಮೆ ಮಾಡುವುದಾಗಿ ಹೇಳಿದವರು ಈಗ ದೇಶದ ಜನರ ಮೇಲೆಯೇ ಸವಾರಿ ಮಾಡಿ ಜನರನ್ನು ಬ್ಯಾಂಕಿನ ಮುಂದೆ ಕ್ಯೂ ನಿಲ್ಲಿಸಿದ್ದಾರೆ” ಎಂದು ಆರೋಪಿಸಿದರು.

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, “ಬಡವರು ಬ್ಯಾಂಕಿನಲ್ಲಿ ಸಾಲು ನಿಂತಿದ್ದಾರೆ, ಶ್ರೀಮಂತರು ಚೆಕ್ಕಿನಲ್ಲಿ ಹಣ ಪಡೆದು ದರ್ಬಾರು ಮಾಡುತ್ತಿದ್ದಾರೆ. ಬಿಜೆಪಿಯ ದೊಡ್ಡ ಕುಳಗಳನ್ನು ಮತ್ತು ಬಿಜೆಪಿಗೆ ಹಣಕಾಸಿನ ನೆರವು ನೀಡುವವರನ್ನು ರಕ್ಷಿಸಲು ನೋಟ್ ಬ್ಯಾನ್ ಹೆಸರಿನಲ್ಲಿ ಮಾಡಿರುವ ಬಹುದೊಡ್ಡ ನಾಟಕ” ಎಂದರು.