ಕನ್ಯಾನದಲ್ಲಿ ಭಾರೀ ಬಂದೋಬಸ್ತ್

ಭಿನ್ನಕೋಮು ಯುವಕರ ಮಾರಾಮಾರಿ ಪ್ರಕರಣ 

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಕರೋಪಾಡಿಯಲ್ಲಿ ನಡೆದಿದ್ದ ಘರ್ಷಣೆಯಿಂದಾಗಿ ಉದ್ವಿಗ್ನ ಸ್ಥಿತಿ ತಲೆದೋರಿದ್ದ ಕನ್ಯಾನ ಪರಿಸರ ಸಹಜ ಸ್ಥಿತಿಗೆ ಮರಳಿದ್ದು ಘಟನೆಗೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಕನ್ಯಾನ ಸುತ್ತಮುತ್ತ ಬಿಗಿ ಬಂದೋಬಸ್ತ್ ಹಾಕಲಾಗಿದ್ದು, ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸೋಮವಾರ ಮುಸ್ಸಂಜೆ ಕೇರಳ ಗಡಿಭಾಗದ ಮುಗುಳಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಮಹಮ್ಮದ್ ಹನೀಫ್ ಮೇಲೆ ಭಿನ್ನಕೋಮಿನ ಯುವಕರ ತಂಡ ಹಲ್ಲೆ ನಡೆಸಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಇನ್ನೊಂದು ಗುಂಪು ಹನೀಫಗೆ ಹಲ್ಲೆ ನಡೆಸಿದ ಯುವಕರ ಮೇಲೆ ಪ್ರತಿಹಲ್ಲೆ ನಡೆಸಿತ್ತು. ಇದಾದ ಮರುಕ್ಷಣದಲ್ಲೇ ಕನ್ಯಾನ ಪೇಟೆಯನ್ನು ಬಂದ್ ಮಾಡಿಸಿದ ಯುವಕರ ಗುಂಪು ಮಾರಕಾಸ್ತ್ರಗಳನ್ನು ಬೀಸುತ್ತಾ ಸೋಡಾ ಬಾಟಲಿಗಳನ್ನು ರಸ್ತೆಗೆಸೆದು ರಾದ್ದಾಂತ ಸೃಷ್ಟಿಸಿತ್ತು. ಮಾಹಿತಿ ಪಡೆದ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ತಕ್ಷಣವೇ ಕನ್ಯಾನಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಹನೀಫ್ ಮೇಲೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳ ಪೈಕಿ ಕೊಕ್ಕಡ ಸಮೀಪದ ಶಿಬಾಜೆ ಬೇಂಗಳ ನಿವಾಸಿ ರಾಧಾಕೃಷ್ಣನನ್ನು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದ ಐವರು ಆರೋಪಿಗಳ ಪೈಕಿ ಕನ್ಯಾನ ಗ್ರಾಮದ ರಹೀಂ, ಇರ್ಷಾದ್ ಎಂಬಿಬ್ಬರನ್ನು ಬಂಧಿಸಿದ್ದಾರೆ. ಶಾಂತಿ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಮಾಡಿದ್ದು, ಇದೀಗ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ.