ನೈರುತ್ಯ ಮಾರುತದ ರೌದ್ರಾವತಾರ, ರಾಜ್ಯದಲ್ಲಿ ಹಲವೆಡೆ ಭಾರೀ ಮಳೆ

ಸಾಂದರ್ಭಿಕ ಚಿತ್ರ

ಬೆಂಗಳೂರು : ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಹಾವಾಮಾನ ಇಲಾಖೆಯು ಬೆಂಗಳೂರು ಮತ್ತು ರಾಜ್ಯ ಇತರ ಭಾಗಗಳ ಸ್ಥಳೀಯ ಆಡಳಿತಗಳಿಗೆ ಈ ಬಗ್ಗೆ ಎಚ್ಚರಿಕೆಯನ್ನು ನೀಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ಉಸ್ತುವಾರಿ ನಿರ್ದೇಶಕ ಸುಂದರ್ ಎಂ ಮೆಟ್ರಿ ಹೇಳಿದ್ದಾರೆ.

“ಮುಂದಿನ ಎರಡು ದಿನಗಳು ರಾಜ್ಯದಲ್ಲಿ ಗುಡುಗು ಮತ್ತು ಮಳೆಗಳಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29ರಿಂದ 20 ಡಿಗ್ರಿ ಸೆಲ್ಷಿಯಸ್‍ಗಳ ನಡುವೆ ಇರಲಿದೆ” ಎಂದು ಸುಂದರ್ ಹೇಳಿದ್ದಾರೆ.

ಹವಾಮಾನ ಇಲಾಖೆ ಪ್ರಕಾರ ಶುಕ್ರವಾರದಂದು ಬೆಂಗಳೂರಿನಲ್ಲಿ ಒಟ್ಟು 68.7 ಎಂ ಎಂ ಮಳೆ ಬಿದ್ದಿದೆ, ಅದರಲ್ಲಿ 60 ಎಂ ಎಂ ಮಳೆ ಸಂಜೆ 6ರಿಂದ 8 ಗಂಟೆ ಒಳಗೆ ಎರಡೇ ಗಂಟೆಗಳಲ್ಲಿ ಬಂದಿದೆ. “ಪರಿಣಾಮವು ಬಹಳ ಗಂಭೀರವಾಗಿತ್ತು. ಸಂಜೆ ರಸ್ತೆಗಳಲ್ಲಿ ಸಾರಿಗೆ ಹೆಚ್ಚಾಗಿರುವ ಸಂದರ್ಭದಲ್ಲೇ ಮಳೆ ಬಂದಿದೆ. ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ನಗರ ದೊಡ್ಡ ಸಮಸ್ಯೆ ಎದುರಿಸಿದೆ” ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿಯಂತ್ರಣ ಸಂಸ್ಥೆಯ ವಿವರಗಳ ಪ್ರಕಾರ ನಗರದ ದಕ್ಷಿಣ ಮತ್ತು ಪಶ್ಚಿಮ ಭಾಗಗಳು ಅತಿಯಾದ ಮಳೆಯನ್ನು ಕಂಡಿವೆ. ಬೊಮ್ಮನಹಳ್ಳಿ ಮತ್ತು ಕೋಣನಕುಂಟೆ ಪ್ರದೇಶದಲ್ಲಿ 83.5 ಎಂ ಎಂ ಮಳೆಯಾಗಿದೆ. ಕೆಂಗೇರಿಯಲ್ಲಿ 73 ಎಂ ಎಂ ಮಳೆಯಾಗಿದೆ.

ಕರ್ನಾಟಕದ ಒಳವಲಯದಲ್ಲಿ ಮತ್ತು ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ನೈರುತ್ಯ ಮಾರುತ ರೌದ್ರಾವತಾರವನ್ನು ತೋರಿಸಿದೆ ಎಂದು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ. “ಬಾಗಲಕೋಟೆ, ರಾಯಚೂರು, ಬೆಳಗಾವಿ, ಕೊಪ್ಪಳ, ಕಲಬುರ್ಗಿ, ಚಿಕ್ಕಮಗಳೂರು ಮತ್ತು ಬಳ್ಳಾರಿಗಳಲ್ಲಿ ಭಾರೀ ಮಳೆ ದಾಖಲಾಗಿದೆ” ಎಂದೂ ಅವರು ತಿಳಿಸಿದರು.