ಗ್ಯಾಸ್ ಸಿಲಿಂಡರ್ ಸಂಗ್ರಹ ಘಟಕದಲ್ಲಿ ಭಾರೀ ಬೆಂಕಿ

ಹೈದರಾಬಾದ್ : ಹೈದರಾಬಾದ್ ಹೊರವಲಯದ ಘಾಟ್ಕೇಸರ್-ಚೆರ್ಲಪಳ್ಳಿ ರೋಡಿನಲ್ಲಿರುವ ಎಚ್‍ಪಿಸಿಎಲ್ ಗ್ಯಾಸ್ ತುಂಬುವ ಘಟಕವೊಂದರಲ್ಲಿ ಭಾರೀ ಬೆಂಕಿ ಅನಾಹುತವೊಂದು ಸಂಭವಿಸುತ್ತಲೇ ಸರಣಿಯೋಪಾದಿಯಲ್ಲಿ ಹಲವು ಗ್ಯಾಸ್ ಸಿಲಿಂಡರುಗಳು ಸ್ಫೋಟಗೊಂಡು ಬೆಂಕಿ ರುದ್ರಾವತಾರ ಎಲ್ಲೆಡೆ ವ್ಯಾಪಿಸಿದೆ. ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದ

ಬೆಂಕಿ ಅವಘಡ ಸಂಭವಿಸಿದೆ. ಈ ಘಟಕದಿಂದ ಹೈದರಾಬಾದ್ ಮತ್ತು ರಂಗಾರೆಡ್ಡಿ ಜಿಲ್ಲೆಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ಇದುವರೆಗೆ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಆದರೆ ಬೆಂಕಿ ಕೆನ್ನಾಲಗೆ ದಿಗಂತದತ್ತ ಹಬ್ಬಿದ್ದು, ಸುಮಾರು ಎರಡ್ಮೂರು ಕಿ ಮೀ ದೂರಕ್ಕೂ ಬೆಂಕಿ ಹೊಗೆ ಕಾಣಿಸಿಕೊಂಡಿದೆ.

ಬೆಂಕಿ ಅವಘಡ ಸಂಭವಿಸುತ್ತಲೇ ಘಟಕದಲ್ಲಿದ್ದ ಕೆಲಸ ಮಾಡುತ್ತಿದ್ದ ಕಾರ್ಮಿಕರು ಭಯ-ಭೀತಿಯಿಂದ ಹೊರಗೆ ಓಡಿ ಹೋಗಿದ್ದಾರೆ. ಭದ್ರತಾ ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ, ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದು ಮೂಲಗಳು ತಿಳಿಸಿವೆ.