ಆಧಾರ್ ನೋಂದಣಿಗಾಗಿ ಭಾರೀ ಸಾಲು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತಾಲೂಕು ಮಟ್ಟದ ಆಧಾರ್ ಮೇಳವನ್ನು ನಗರದ ಮಿನಿ ಪುರಭವನದಲ್ಲಿ ಆಯೋಜಿಸಲಾಗಿದ್ದು, ಸಾರ್ವಜನಿಕರಿಂದ ಅದ್ಭುತ ಸ್ಪಂದನೆ ದೊರಕಿದೆ. ಆಧಾರ್ ನೋಂದಣಿ, ತಿದ್ದುಪಡಿಗಾಗಿ ಮಂಗಳವಾರವೂ ಪುರಭವನದ ಮುಂಭಾಗದಲ್ಲಿ ಭಾರೀ ಉದ್ದದ ಸಾಲು ಕಂಡುಬಂದಿದೆ. ಸಾಲಿನಲ್ಲಿ ನಿಂತ ಸಾರ್ವಜನಿಕರು ಇಲಾಖೆ ಅವ್ಯವಸ್ಥೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರದಂದು ನೋಂದಣಿ ಮಾಡಿಸಿದವರಿಗೆ ಡಿಸೆಂಬರ್ 7ರವರೆಗಿನ ದಿನಾಂಕ ನಮೂದಿಸಿ ಟೋಕನ್  ನೀಡಲಾಗಿದೆ. ಅಲ್ಲದೆ ಮತ್ತೆ ಬಂದವರು ಕೂಡಾ ಟೋಕನ್ ಪಡೆದುಕೊಂಡು ಹಿಂತಿರುಗುತ್ತಿದ್ದಾರೆ. ಹೊಸದಾಗಿ

ಸೇರ್ಪಡೆಯಾಗಲು, ತಿದ್ದುಪಡಿ ಮಾಡಲು ಬೆಳಿಗ್ಗೆ 7 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಜನತೆ ಕ್ಯೂ ನಿಂತಿದ್ದಾರೆ.

ಜಿಲ್ಲಾಡಳಿತದ ವತಿಯಿಂದ ನಾಲ್ಕು ದಿನಗಳ ಕಾಲ ಆಧಾರ್ ಅದಾಲತ್ ನಡೆಯಲಿರುವ ಕಾರಣ ಎಲ್ಲರೂ ಬಂದಾಕ್ಷಣ ಆಧಾರ್ ಕಾರ್ಡ್ ಆಗುತ್ತದೆ ಎಂದು ತಿಳಿದಿದ್ದರು. ಆದರೆ, ನಾಲ್ಕು ದಿನಗಳ ಅವಧಿಗೆ ಈಗಾಗಲೇ ನೋಂದಣಿ ಮುಗಿದಿದೆ. ಹೊಸತಾಗಿ ಟೋಕನಿಗಾಗಿ ಮತ್ತೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಬೇಕು ಎಂಬ ಮಾಹಿತಿ ಇಲ್ಲಿ ನೀಡಲಾಯಿತು. ಕೊನೆಗೆ 10 ಗಂಟೆ ವೇಳೆಗೆ ಆಧಾರ್ ನೋಂದಣಿ ಕೇಂದ್ರದ ಸಿಬ್ಬಂದಿ ಬಂದಿದ್ದವರಿಗೆ ಟೋಕನ್ ನೀಡುವ ವ್ಯವಸ್ಥೆ ಆರಂಭಿಸಿದರು. ಮಂಗಳವಾರ ಟೋಕನ್ ನೀಡಿದವರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಧಾರ್ ನೋಂದಣಿಗೆ ಜನವರಿ ತಿಂಗಳ ದಿನಾಂಕವನ್ನು ನೀಡಲಾಯಿತು.

ವಯೋವೃದ್ಧರು, ಮಕ್ಕಳು ನೂರಾರು ಸಂಖ್ಯೆಯಲ್ಲಿ ಸಾಲಿನಲ್ಲಿ ನಿಂತ ಜನರಿಗೆ ಟೋಕನಿನಲ್ಲಿ ಮತ್ತೆ ಒಂದು ತಿಂಗಳ ನಂತರದ ಅವಧಿ ನೋಡಿ ಗಲಿಬಿಲಿ. ಆಧಾರ್ ನೋಂದಣಿ ಪ್ರಕ್ರಿಯೆ ಗೊಂದಲದ ಗೂಡಾಗುತ್ತಿದೆ, ಸಮರ್ಪಕವಾಗಿ ಮಾಹಿತಿ ನೀಡಲಾಗುತ್ತಿಲ್ಲ ಎಂಬ ಆಕ್ಷೇಪ ಸಾರ್ವಜನಿಕರದ್ದಾಗಿತ್ತು.

“ಇಲ್ಲಿನ ವ್ಯವಸ್ಥೆ ಸರಿ ಇಲ್ಲ. ಇಲ್ಲಿ ಟೋಕನ್ ನೀಡುವ ಮುಂಚೆಯೇ ಹಲವು ಮಂದಿ ಟೋಕನ್ ಪಡೆದುಕೊಂಡಾಗಿದೆ. ದೂರದೂರಿನಿಂದ ನಾವು ಬರುವಷ್ಟರ ವೇಳೆಗೆ ಅದಾಗಲೇ ಸ್ಥಳೀಯರು ಬಂದು ಕ್ಯೂ ನಿಂತಿದ್ದಾರೆ. ಸೋಮವಾರ ಮತ್ತು ಮಂಗಳವಾರವೂ ಕ್ಯೂ ನಿಂತು ಸಾಕಾಗಿದೆ. ಇನ್ನೂ ನಮ್ಮ ಆಧಾರ್ ಕಾರ್ಡ್ ಸರಿಯಾಗಿಲ್ಲ” ಎಂದು ಫರಂಗಿಪೇಟೆಯ ಮಕ್ಸೂದ್ ಮಾಧ್ಯಮಕ್ಕೆ ಅಳಲು ತೋಡಿಕೊಂಡರು.

ಮೂರು ದಿನಗಳ ಅವಧಿಗೆ ಟೋಕನ್ ಪಡೆದ ಬಳಿಕವೂ ಸೋಮವಾರ ಆಧಾರ್ ನೋಂದಣಿಗಾಗಿ ಜನ ಸೇರಿದ್ದರಿಂದ 40 ಮಂದಿಗೆ ಹೆಚ್ಚುವರಿಯಾಗಿ ಟೋಕನ್ ನೀಡಲಾಗಿದೆ. ಇವರಿಗೆಲ್ಲಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಕೌಂಟರ್ ತೆರೆದು ನೋಂದಣಿ ಪ್ರಕ್ರಿಯೆ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.