ಬಂಟ್ವಾಳ ಪೇಟೆ ರಸ್ತೆ ಅಗಲೀಕರಣ ಸಭೆಯಲ್ಲಿ ಉದ್ವೇಗಭರಿತ ಚರ್ಚೆ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಬಂಟ್ವಾಳ ಪೇಟೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ನೇತೃತ್ವದಲ್ಲಿ ಶನಿವಾರ ಇಲ್ಲಿನ ಪುರಸಭಾ ಸಭಾಂಗಣ ದಲ್ಲಿ ನಡೆದ ಮಹತ್ವಪೂರ್ಣ ಸಮಾ ಲೋಚನಾ ಸಭೆಯಲ್ಲಿ ಅಭಿವೃದ್ದಿ ಪರ ಮಾತನಾಡಬೇಕಾದ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರು  ಬಾಲಿಶ ಅಭಿಪ್ರಾಯ ಮಂಡಿಸಿ ಸಭೆಯ ಮಹತ್ವವನ್ನೇ ನಗಣ್ಯ ಮಾಡಲು ಪ್ರಯತ್ನಿಸಿದ ಘಟನೆಗೆ ಸಭೆ ಸಾಕ್ಷಿಯಾಯಿತು.

ಈಗಾಗಲೇ ಬಂಟ್ವಾಳ ಪೇಟೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಪುರಸಭಾ ಸಭಾಂಗಣದಲ್ಲಿ ಮಹತ್ವದ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಅಧಿಕಾರಿಗಳು ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದಂತೆ ಮಧ್ಯಪ್ರವೇಶಿಸಿ ಅಭಿಪ್ರಾಯ ಮಂಡಿಸಿದ ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ ಎಚ್ ಖಾದರ್ ಮಾತನಾಡಿ “ಬಂಟ್ವಾಳ ಪೇಟೆಯಲ್ಲಿ ರಸ್ತೆ ಅಗಲೀಕರಣವೇ ಬೇಡ. ವ್ಯಾಪಾರಿಗಳು ಫುಟ್ಪಾತ್ ತೆರವುಗೊಳಿಸಿ ವ್ಯಾಪಾರ ಮಾಡಿದರೆ ಸಾಕು” ಎಂದು ಹೇಳಿ ಇಡೀ ಸಭೆಯ ಉದ್ದೇಶವನ್ನೇ ಗೌಣ ಮಾಡಲು ಯತ್ನಿಸಿದರು.

ಖಾದರ್ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯ ರಿಕ್ಷಾ ಚಾಲಕ ವಿಶ್ವನಾಥ ಚಂಡ್ತಿಮಾರು ಸಹಿತ ಸಾರ್ವಜನಿಕರು “ನ್ಯಾಯೋಚಿತ ಹಾಗೂ ವೈಜ್ಞಾನಿಕ ರೀತಿಯಲ್ಲಿ ಪೇಟೆ ಅಗಲೀಕರಣ ಅನಿವಾರ್ಯವಾಗಿದ್ದು, ಈ ಬಗ್ಗೆ ಅಧಿಕಾರಿಗಳು ಯಾವುದೇ ಸ್ವಾರ್ಥ ಹಾಗೂ ಮೂಗಿನ ನೇರಕ್ಕಿರುವ ರಾಜಕೀಯಕ್ಕೆ ಕಿವಿಗೊಡಬಾರದು” ಎಂದು ಟಾಂಗ್ ನೀಡಿದರು.

ಈ ಸಂದರ್ಭ ಖಾದರ್ ಅವರು ಸಾರ್ವಜನಿಕರ ವಿರುದ್ದ ಏರಿ ಹೋದ ಹಿನ್ನಲೆಯಲ್ಲಿ ಬಿ ಎಚ್ ಖಾದರ್ ಹಾಗೂ ಸಾರ್ವಜನಿಕರ ನಡುವೆ ಕೆಲ ಕಾಲ ಮಾತಿನ ವಿನಿಮಯ ಕೂಡಾ ನಡೆಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಪುರಸಭಾ ಸದಸ್ಯ ಪ್ರವೀಣ್ ಬಿ ಅವರು “ಜವಾಬ್ದಾರಿಯುತ ಸ್ಥಾನದಲ್ಲಿರುವ ಖಾದರ್ ಅವರು ಸಾರ್ವಜನಿಕರ ಮೇಲೆ ಏರಿ ಹೋಗುವುದು ಸರಿಯಲ್ಲ. ಸಾರ್ವಜನಿಕರ ಅಭಿಪ್ರಾಯ-ಸಲಹೆಗಳಿಗೂ ಸೂಕ್ತ ಮನ್ನಣೆ ಕಲ್ಪಿಸಬೇಕಿದೆ” ಎಂದರು.

ಸಭೆಯಲ್ಲಿ ಮಾತನಾಡಿದ ಪುರಸಭಾ ಸದಸ್ಯ ಮೂನಿಶ್ ಅಲಿ ಇದೊಂದು ಟ್ರಾಫಿಕ್ ಸಂಬಂಧಿ ಗಂಭೀರ ಸಭೆ ಆಗಿದ್ದರೂ ಟ್ರಾಫಿಕ್ ಎಸ್ಸೈ ಆಗಲೀ, ಸಿಬ್ಬಂದಿಗಳಾಗಲೀ ಸಭೆಯಲ್ಲಿ ಯಾಕೆ ಭಾಗವಹಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವರ್ತಕರ ಸಂಘದ ಅಧ್ಯಕ್ಷ ಬಿ ಸುರೇಶ್ ಬಾಳಿಗಾ ಮಾತನಾಡಿ ಬಂಟ್ವಾಳ ಪೇಟೆಯಲ್ಲಿ ಯಾವುದೇ ಸಮರ್ಪಕ ಮೂಲಭೂತ ಸೌಲಭ್ಯಗಳೇ ಇಲ್ಲದಿದ್ದು, ಪ್ರಥಮವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಆ ಬಳಿಕ ಪೇಟೆ ರಸ್ತೆ ಅಗಲೀಕರಣ ನಡೆಸುವುದಾದರೆ ನಮ್ಮೆಲ್ಲರ ಸಂಪೂರ್ಣ ಸಹಕಾರ ಇದೆ. ಅಗಲೀಕರಣಕ್ಕೆ ಸಂಬಂಧಪಟ್ಟಂತೆ ವೈಜ್ಞಾನಿಕ ಸರ್ವೆ ಕೂಡಾ ನಡೆಯಬೇಕಾಗಿದೆ ಎಂದು ಸಲಹೆ ನೀಡಿದರು. ಪೇಟೆಯ ಅಭಿವೃದ್ದಿ ಪರ ಮಾತನಾಡಬೇಕಾದ ಜನಪ್ರತಿನಿಧಿಗಳು ಸಭೆಯಲ್ಲಿ ಗೈರು ಹಾಜರಾಗಿರುವ ಬಗ್ಗೆಯೂ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಕೊನೆಗೂ ಬಿ ಎಚ್ ಖಾದರ್ ಅವರ ಸಲಹೆಗೆ ಮನ್ನಣೆ ಕಲ್ಪಿಸದ ಸಹಾಯಕ ಆಯುಕ್ತ ರೇಣುಕಾ ಪ್ರಸಾದ್  ಸೂಕ್ತ ವ್ಯವಸ್ಥೆ ಕಲ್ಪಿಸಿಕೊಂಡು, ವೈಜ್ಞಾನಿಕ ಸರ್ವೆ ನಡೆಸಿ 8 ಮೀಟರ್ ಅಥವಾ ಅದಕ್ಕೆ ಹೊಂದಿಕೊಂಡು ಪೇಟೆ ರಸ್ತೆ ಅಗಲೀಕರಣ ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು. ಪೀಕ್ ಅವರ್‍ಗಳಲ್ಲಿ ಲೋಡ್-ಅನ್‍ಲೋಡ್‍ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗುವುದು. ಈ ಸಂಬಂಧ ಸ್ಥಳೀಯರ ಸಲಹೆ-ಸೂಚನೆಗಳಿಗೂ ಮನ್ನಣೆ ನೀಡಲಾಗುವುದು. ರಿಕ್ಷಾ ಪಾರ್ಕಿಂಗ್‍ಗೆ ಸೂಕ್ತ ಸ್ಥಳ ಹುಡುಕಲಾಗುವುದು. ಜನರ ಉಪಯೋಗಕ್ಕೆ ಬರುವ ಜಾಗದಲ್ಲಿ ಶೌಚಾಲಯ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು. ಈ ಎಲ್ಲಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿ ಈ ಸಂಬಂಧ ಶೀಘ್ರ ಆದೇಶ ಹೊರಡಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ನಗರ ಯೋಜನಾ ಕೋಶದ ನಿರ್ದೇಶಕ ಪ್ರಸನ್ನ, ಪುರಸಭಾಧ್ಯಕ್ಷ ಪಿ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಮುಖ್ಯಾಧಿಕಾರಿ ಸುಧಾಕರ, ಪಿಡಬ್ಲ್ಯುಡಿ ಇಂಜಿನಿಯರ್‍ಗಳಾದ ಉಮೇಶ್ ಭಟ್, ಅರುಣ್ ಪ್ರಕಾಶ್ ಡಿ’ಸೋಜ, ಸರ್ವೆ ಅಧಿಕಾರಿಗಳು ಭಾಗವಹಿಸಿದ್ದರು.