ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಆರೋಗ್ಯಾಧಿಕಾರಿ ಭೇಟಿ

ಸಮಸ್ಯೆ ಬಗೆಹರಿಸುವುದಾಗಿ ಭರವಸೆ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ನರ್ಸುಗಳು ಮತ್ತು ಸಿಬ್ಬಂದಿಗಳಲ್ಲಿ ಸೂಕ್ತ ಹೊಂದಾಣಿಕೆ ಕೊರತೆಯಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಲಭಿಸುತ್ತಿಲ್ಲ ಎನ್ನುವ ದೂರು ಸಾರ್ವಜನಿಕರಿಂದ ಕೇಳಿಬಂದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಜಿಲ್ಲಾ ಆರೋಗ್ಯಾಧಿಕಾರಿ ಡಾ ಅಶೋಕಕುಮಾರ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು, ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಜೊತೆ ಚರ್ಚಿಸಿ ಮುಂದೆ ಹೀಗಾಗದಂತೆ ನಿಗಾ ವಹಿಸುವ ಭರವಸೆ ನೀಡಿದರು.

“ಇತ್ತೀಚಿನ ಕೆಲವು ದಿನಗಳಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾಗಿ ಮಾಹಿತಿ ದೊರೆಯುತ್ತಿಲ್ಲ. ಸ್ತ್ರೀರೋಗ ತಜ್ಞರು ರಜೆಯಲ್ಲಿದ್ದಾಗ ಇಲ್ಲಿಗೆ ಬರುವ ಗರ್ಭಿಣಿ ಸ್ತ್ರೀಯರನ್ನು ಮಾತನಾಡಿಸುವವರೂ ಇಲ್ಲ. ಗರ್ಭಿಣಿ ಸ್ತ್ರೀಯರನ್ನು ಬೇರೆ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ನರ್ಸುಗಳಲ್ಲಿ ಕೇಳಿದರೆ ಉಢಾಪೆ ಉತ್ತರ ಸಿಗುತ್ತದೆಯೇ ಹೊರತು ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ” ಎನ್ನುವ ದೂರು ಸಾರ್ವಜನಿಕರಿಂದ ಕೇಳಿಬಂದಿತ್ತು. ಆಸ್ಪತ್ರೆಯ ಇತ್ತೀಚಿನ ದಿನಗಳ ಅವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು.

“ವೈದ್ಯರು ಹಾಗೂ ನರ್ಸುಗಳು ಆಸ್ಪತ್ರೆಗೆ ಬರುವ ರೋಗಿಗಳನ್ನು ಸೌಜನ್ಯದಿಂದ ಮಾತನಾಡಿಸಿ ಅವರ ಕಷ್ಟಗಳನ್ನು ಅರಿತು ಪರಿಹಾರ ಸೂಚಿಸಬೇಕಾಗುತ್ತದೆ. ಆಸ್ಪತ್ರೆಗೆ ಯಾವುದೇ ವ್ಯಕ್ತಿ ಬಂದರೂ ಆತನ ಜೊತೆ ಸೌಜನ್ಯಯುತವಾಗಿ ಮಾತನಾಡಿಸಿ ಅವರಿಗೆ ಅಗತ್ಯದ ಚಿಕಿತ್ಸೆ ನೀಡುವಂತಾಗಬೇಕು. ಒಂದು ವೇಳೆ  ತಜ್ಞವೈದ್ಯರು ಲಭ್ಯವಿಲ್ಲವಾದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಅಲ್ಲಿ ವೈದ್ಯರ ಲಭ್ಯತೆಯನ್ನು ಖಚಿತಪಡಿಸಿಕೊಂಡೇ ರೋಗಿಗಳನ್ನು  ಕಳುಹಿಸಿಕೊಡಬೇಕಾಗುತ್ತದೆ” ಎಂದು ಆರೋಗ್ಯಾಧಿಕಾರಿ ಸೂಚಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಅಶೋಕಕುಮಾರ ಪತ್ರಕರ್ತರೊದಿಗೆ ಮಾತನಾಡಿ, “ಆಸ್ಪತ್ರೆಗೆ ಬಂದ ರೋಗಿಗಳಿಗೆ ಸರಿಯಾದ ಮಾಹಿತಿ ನೀಡದೇ ಅವರನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲದಿರುವುದು ತಪ್ಪು. ಜಿಲ್ಲೆಯ ಇನ್ನಿತರ ತಾಲೂಕಾಸ್ಪತ್ರೆಗಳಿಗೆ ಹೋಲಿಸಿದರೆ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ನರ್ಸುಗಳು ಸೇರಿದಂತೆ ಅಗತ್ಯ ಎಲ್ಲಾ ಸೌಕರ್ಯಗಳಿವೆ. ಆದರೆ ಕೆಲಸದಲ್ಲಿ ಬೇಜವಾಬ್ದಾರಿತನ ತೋರುತ್ತಿರುವುದು ಸರಿಯಲ್ಲ. ಇನ್ನು ಮುಂದೆ ಈ ರೀತಿ ಯಾವುದೇ ವರ್ತನೆ ನಡೆಯಬಾರದು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು, ವೈದ್ಯರಿಗೂ ಸಹ ಕೆಲಸದ ಜವಾಬ್ದಾರಿಯನ್ನು ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಸರಿಪಡಿಸಿಕೊಂಡು ಹೋಗುವುದರ ಜೊತೆಗೆ ರೋಗಿಗಳನ್ನು ಸೌಜನ್ಯ ರೀತಿಯಲ್ಲಿ ನೋಡಿಕೊಳ್ಳಲು ಸೂಚಿಸಲಾಗಿದೆ” ಎಂದರು. ಉಪಸ್ಥಿತರಿದ್ದ ಸಾರ್ವಜನಿಕರು, “ಆಸ್ಪತ್ರೆಯ ಸಮಸ್ಯೆ ಬಗೆಹರಿಯದಿದ್ದಲ್ಲಿ ಮತ್ತು ರೋಗಿಗಳ ಬಗ್ಗೆ ಯಾರೇ ನಿರ್ಲಕ್ಷ್ಯ ತಾಳಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ” ಎಂದರು.