ಕೈಕಾರದಲ್ಲಿ ಪಾಳುಬಿದ್ದ ಆರೋಗ್ಯ ಉಪಕೇಂದ್ರ

ಖಾಯಂ ಸಿಬ್ಬಂದಿಯ ಕೊರತೆ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಒಳಮೊಗ್ರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೈಕಾರದಲ್ಲಿ ನಿರ್ಮಿಸಲಾಗಿರುವ ಆರೋಗ್ಯ ಉಪಕೇಂದ್ರವು ಪಾಳು ಬಿದ್ದಿದೆ. ಇದರಿಂದಾಗಿ ಗ್ರಾಮಸ್ಥರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ರೋಗಿಗಳಿಗಾಗಿ ಇಂತಹ ಆರೋಗ್ಯ ಉಪಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರದಲ್ಲಿ ಎ ಎನ್ ಎಮ್ ಮಹಿಳಾ ಸಿಬ್ಬಂದಿ ಇರಬೇಕು ಎಂಬ ನಿಯಮವಿದೆ. ಆದರೆ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುಪರ್ದಿಗೆ ಒಳಪಟ್ಟಿರುವ ಕೈಕಾರದಲ್ಲಿರುವ ಆರೋಗ್ಯ ಉಪಕೇಂದ್ರವನ್ನು ನೋಡಿದರೆ ಇದರಲ್ಲಿ ಸಿಬ್ಬಂದಿ ಇರುವಂತೆ ಕಾಣುವುದಿಲ್ಲ. ಕೇಂದ್ರದ ಅಂಗಳದ ಸುತ್ತ ಪೊದೆ, ಗಿಡಗಂಟಿ, ಕಸಕಡ್ಡಿ ತುಂಬಿಕೊಂಡಿದೆ. ಹಾಕಿದ ಗೇಟಿಗೆ ಬಳ್ಳಿಗಳು ಹಬ್ಬಿಕೊಂಡಿವೆ.

ಒಳಮೊಗ್ರು ಗ್ರಾ ಪಂ ವ್ಯಾಪ್ತಿಯಲ್ಲಿ ಎರಡು ಆರೋಗ್ಯ ಉಪಕೇಂದ್ರಗಳಿವೆ. ಒಂದು ಒಳಮೊಗ್ರುನಲ್ಲಿದ್ದರೆ ಇನ್ನೊಂದು ಕೈಕಾರದಲ್ಲಿದೆ. ಒಳಮೊಗ್ರು ಆರೋಗ್ಯ ಉಪಕೇಂದ್ರವು ಸುಮಾರು 600 ಮನೆಗಳಿಗೆ ಸೀಮಿತವಾದರೆ, ಕೈಕಾರದಲ್ಲಿರುವ ಆರೋಗ್ಯ ಉಪಕೇಂದ್ರವು ಸುಮಾರು 400 ಮನೆಗಳಿಗೆ ಸೀಮಿತವಾಗಿದೆ. ಉಪಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದಲ್ಲದೆ ಮಕ್ಕಳಿಗೆ ಇಂಜೆಕ್ಷನ್ ನೀಡುವ ಕಾರ್ಯಕ್ರಮಗಳು, ಲಸಿಕಾ ಕಾರ್ಯಕ್ರಮಗಳು ಇತ್ಯಾದಿ ನಡೆಯುತ್ತದೆ.

ಒಬ್ಬ ಎ ಎನ್ ಎಮ್ ಮಹಿಳಾ ಸಿಬ್ಬಂದಿಯು ಉಪಕೇಂದ್ರದಲ್ಲಿ ಬೆಳಗ್ಗಿನಿಂದ ಸಂಜೆ ತನಕ ಇರಬೇಕು ಎಂಬ ನಿಯಮವಿದೆ. ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಜೊತೆಗೆ ಮಾಹಿತಿಯನ್ನು ಕೂಡ ನೀಡಬೇಕಾಗುತ್ತದೆ. ಆಶಾ ಕಾರ್ಯಕರ್ತೆಯರು ಕೂಡ ಇಂತಹ ಆರೋಗ್ಯ ಉಪಕೇಂದ್ರಗಳಿಗೆ ತಿಂಗಳಿಗೆ ಒಮ್ಮೆಯಾದರೂ ಭೇಟಿ ನೀಡಬೇಕು ಎಂಬ ನಿಯಮವೂ ಇದೆ. ಆದರೆ ಕೈಕಾರದ ಉಪಕೇಂದ್ರಕ್ಕೆ ಯಾರು ಬರುತ್ತಾರೆ ? ಯಾರೂ ಬರೋದಿಲ್ಲ ಎಂಬುದು ದೇವರೇ ಬಲ್ಲ !

ಸುಮಾರು 15 ವರ್ಷಗಳ ಹಿಂದೆ ನಿರ್ಮಾಣಗೊಂಡ ಕೈಕಾರದ ಆರೋಗ್ಯ ಉಪಕೇಂದ್ರವನ್ನು ನೋಡಿದರೆ ಪಾಳು ಬಿದ್ದ ಹಳೆ ಕಟ್ಟಡದಂತೆ ಕಾಣುತ್ತದೆ. ಇಡೀ ಗ್ರಾಮಕ್ಕೆ ಸ್ವಚ್ಛತೆಯ ಪಾಠ ಮಾಡುವ ಆರೋಗ್ಯ ಇಲಾಖೆ, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಈ ಉಪಕೇಂದ್ರಕ್ಕೆ ಒಮ್ಮೆಯಾದರೂ ಭೇಟಿ ನೀಡಿದ್ದಾರೋ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಸಿಬ್ಬಂದಿಯನ್ನು ಖಾಯಂ ಆಗಿ ಕೇಂದ್ರದಲ್ಲೇ ವಾಸ್ತವ್ಯ ಇರುವಂತೆ ಇಲಾಖೆ ವ್ಯವಸ್ಥೆ ಮಾಡಬೇಕು ಎಂಬುದು ಜನರ ಬೇಡಿಕೆ ಆರೋಗ್ಯ ಇಲಾಖೆಯ ಕಿವಿಗೆ ನಾಟುತ್ತಾ ಎಂಬುದನ್ನು ಕಾದು ನೋಡಬೇಕು.