ಅವನು ಮದುವೆಯಾಗಿದ್ದೇ ಸೇಡು ತೀರಿಸಿಕೊಳ್ಳಲು

ಪ್ರ : ನನಗೆ ಮದುವೆಯಾಗಿ ಈಗ ಎರಡು ತಿಂಗಳಾದವು. ಮದುವೆಯಾದಾಗಿನಿಂದ ನಾನು ಒಂದು ದಿನವೂ ಸಂತೋಷದಿಂದ ಇಲ್ಲ . ಅವರು ನನ್ನನ್ನು ಇಷ್ಟ ಪಟ್ಟೇ ಮದುವೆಯಾಗಿದ್ದು ಅಂದುಕೊಂಡಿದ್ದೆ. ಆದರೆ ಅವರು ನನ್ನನ್ನು ದ್ವೇಷಿಸುತ್ತಾರಂತೆ. ಕಾಲೇಜು ದಿನಗಳಲ್ಲಿ ನನ್ನಿಂದ ಅವರಿಗಾದ ಅವಮಾನವನ್ನು ಅವರಿನ್ನೂ ಮರೆತಿಲ್ಲ. ನಾನಾಗ ಎರಡನೇ ವರ್ಷದ ಬಿಕಾಂ ಓದುತ್ತಿದ್ದೆ. ಆಗ ಅವರು ಫೈನಲ್ ಇಯರ್ ಬಿಎ. ನಾವು ಕಾಲೇಜಿಗೆ ಹೋಗುತ್ತಿದ್ದ ಬಸ್ಸು ಒಂದೇ ಆಗಿತ್ತು. ನೋಡಲು ತೆಳ್ಳಗೆ ಬೆಳ್ಳಗಿದ್ದ ನನ್ನನ್ನು ಅವರು ಇಷ್ಟಪಡುತ್ತಿದ್ದರು. ನನ್ನ ಪ್ರೀತಿ ಸಂಪಾದಿಸಲು ಅನೇಕ ಕಸರತ್ತುಗಳನ್ನೂ ಮಾಡುತ್ತಿದ್ದರು. ನಮ್ಮ ಮನೆಯವರು ಕಷ್ಟದಲ್ಲಿಯೇ ನನ್ನನ್ನು ಕಾಲೇಜು ಓದಿಸುತ್ತಿದ್ದರಿಂದ ನನ್ನ ಬಳಿ ಮೊಬೈಲ್ ಇರಲಿಲ್ಲ. ಅದಕ್ಕಾಗಿ ಅವರು ದಿನಾ ಲೆಟರ್ ಬರೆದು ಸ್ನೇಹಿತೆಯ ಮೂಲಕ ನನಗೆ ಕಳಿಸುತ್ತಿದ್ದರು. ಕೆಲವು ಸಮಯ ನಾನು ಅದಕ್ಕೆ ಹೆಚ್ಚು ಬೆಲೆ ಕೊಟ್ಟಿರಲಿಲ್ಲ. ಅವರ ಕಾಟ ದಿನೇದಿನೇ ಅತಿಯಾದಾಗ ನಾನು ಪ್ರಿನ್ಸಿಪಾಲರ ಹತ್ತಿರ ಹೋಗಿ ದೂರು ಕೊಟ್ಟೆ. ಅವರು ಇವರನ್ನು ಕರೆದು ಚೆನ್ನಾಗಿ ಬೈದು ಇನ್ನು ಮುಂದೆ ಹಾಗೆ ಮಾಡದಂತೆ ವಾರ್ನ್ ಮಾಡಿದ್ದರು. ಇವರಿಗೆ ಅವಮಾನವಾಗಿ ಕಾಲೇಜಿಗೆ ಬರುವುದನ್ನೇ ನಿಲ್ಲಿಸಿದರು. ಅದು ವರ್ಷದ ಕೊನೆಯಾದ್ದರಿಂದ ಅವರಿಗೆ ಪರೀಕ್ಷೆ ಕುಳಿತುಕೊಳ್ಳಲು ತೊಂದರೆಯಾಗಿರಲಿಲ್ಲ. ಆದರೆ ಅದರ ನಂತರ ನಾನು ಹಾಗೆ ಮಾಡಬಾರದಿತ್ತು ಅಂತ ಅನಿಸಿ ತುಂಬಾ ಪಶ್ಚಾತ್ತಾಪ ಪಟ್ಟೆ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂತ ಆಮೇಲೆ ಅನಿಸಲು ಶುರುವಾಯಿತು. ನಾನೂ ಅವರನ್ನು ಪ್ರೀತಿಸುತ್ತಿದ್ದೆ ಅಂತ ಅವರು ಕಾಲೇಜಿಗೆ ಬರುವುದು ನಿಲ್ಲಿಸಿದ ನಂತರ ನನಗರಿವಾಯಿತು. ಫೈನಲ್ ಇಯರನ್ನು ಅವರ ನೆನೆಪಲ್ಲೇ ಕಳೆಯುತ್ತಿದ್ದೆ. ಅದನ್ನು ನನ್ನ ಸ್ನೇಹಿತೆಯಲ್ಲಿಯೂ ಹೇಳಿದ್ದೆ. ಅವಳು ನಾನೂ ಅವರನ್ನು ಪ್ರೀತಿಸುತ್ತಿರುವ ವಿಷಯ ಅವರಲ್ಲಿ ಹೇಳಿದ್ದಳು. ಅವರಾಗಿಯೇ ನಮ್ಮ ಮನೆಯರ ಒಪ್ಪಿಗೆ ಪಡೆದು ನನ್ನನ್ನು ಮದುವೆಯಾಗಿ ಈ ಊರಿಗೆ ಕರೆದುಕೊಂಡು ಬಂದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಅವರು ನನ್ನನ್ನು ಮದುವೆಯಾಗಿದ್ದು ಪ್ರೀತಿಯಿಂದಲ್ಲ, ಬದಲಾಗಿ ಸೇಡು ತೀರಿಸಿಕೊಳ್ಳಲು ಅಂತ ಗೊತ್ತಾಯಿತು. ಬೇಕೆಂದೇ ನನ್ನನ್ನು ಎಲ್ಲರ ಮುಂದೆ ಅವಮಾನಿಸುತ್ತಾರೆ. ತನಗೆ ಬೇಕಾದಾಗ ಮೃಗದಂತೆ ನನ್ನನ್ನು ಅನುಭವಿಸುತ್ತಾರೆ. ಹೆಚ್ಚು ಮಾತೂ ಆಡುವುದಿಲ್ಲ. ಒಮ್ಮೊಮ್ಮೆ ಅವರ ಕಣ್ಣಿನಲ್ಲಿ ಪ್ರೀತಿಯ ಛಾಯೆ ಮೂಡಿದರೂ ಏನೋ ನೆನಪಾದವರಂತೆ ಸಿಡುಕಲು ಪ್ರಾರಂಭಿಸುತ್ತಾರೆ. ಹೇಗೆ ಜೀವನ ಮಾಡಲಿ ಇಂಥವರ ಜೊತೆ?

: ಅವರ ಒಳಮನಸ್ಸಿನಲ್ಲಿ ಇನ್ನೂ ಅವರಿಗೆ ನಿಮ್ಮ ಮೇಲೆ ಪ್ರೀತಿಯಿದೆ. ಅಲ್ಲದಿದ್ದರೆ ಅವರು ನಿಮ್ಮನ್ನು ಮದುವೆಯೇ ಆಗುತ್ತಿರಲಿಲ್ಲ. ನಿಮ್ಮ ಜೀವನ ಹಾಳುಮಾಡಬೇಕು ಅನ್ನುವ ಒಂದೇ ಉದ್ದೇಶ ಅವರಿಗಿದ್ದಿದ್ದರೆ ಅವರು ಬೇರೆ ವಿಧಾನ ನೋಡಿಕೊಳ್ಳುತ್ತಿದ್ದರು. ಒಂದುವೇಳೆ ಅವರು ನಿಮ್ಮನ್ನು ನಿಜವಾಗಿಯೂ ದ್ವೇಷಿಸುತ್ತಿದ್ದರೆ ಮದುವೆಯಾಗಿ ನಿಮ್ಮ ಜೀವನ ಹಾಳುಮಾಡುವುದರ ಜೊತೆಗೆ ತನ್ನ ಜೀವನವೂ ಕೆಡುತ್ತದೆ ಅಂತ ಅವರಿಗೆ ಗೊತ್ತಿಲ್ಲದೇ ಅಲ್ಲ. ಅವರಿಗೆ ನಿಮ್ಮ ಮೇಲೆ ಸಿಟ್ಟು ಇರಬಹುದು, ಆದರೆ ದ್ವೇಷ ಇರಲಿಕ್ಕಿಲ್ಲ. ಕಾಲೇಜಿನಲ್ಲಿ ನಿಮ್ಮಿಂದ ಅವರಿಗಾದ ಅವಮಾನದ ಜ್ವಾಲೆ ಇನ್ನೂ ಆರಿಲ್ಲ. ಆ ಸಿಟ್ಟನ್ನು ನಿಮ್ಮನ್ನು ಅವಮಾನಿಸುವ ಮೂಲಕ ತೀರಿಸಿಕೊಳ್ಳುತ್ತಿದ್ದಾರೆ. ನೀವೀಗ ತಾಳ್ಮೆಯಿಂದ ಅವರ ಸಿಟ್ಟನ್ನು ತಣಿಸುವ ಕೆಲಸ ಮಾಡಬೇಕು. ಪ್ರೀತಿಯಿಂದಲೇ ಅವರನ್ನು ಗೆಲ್ಲಲು ಪ್ರಯತ್ನಿಸಬೇಕು. ಅವರ ಕಣ್ಣಿನಲ್ಲಿ ಇನ್ನೂ ಪ್ರೀತಿಯ ಛಾಯೆ ಇರುವುದರಿಂದ ನೀವು ನಿರಾಶರಾಗಬೇಕಿಲ್ಲ. ಒಮ್ಮೆ ಅವರ ಜೊತೆ ಅವಕಾಶ ಸಿಕ್ಕಾಗ ನಿಮ್ಮ ಮನಸ್ಸಿನ ಭಾವನೆಯನ್ನೆಲ್ಲ ಬಿಚ್ಚಿಡಿ. ನೀವು ಅವರ ಬಗ್ಗೆ ಪ್ರಿನ್ಸಿಪಾಲರ ಬಳಿ ದೂರು ಕೊಟ್ಟ ನಂತರ ಅನುಭವಿಸಿದ ಯಾತನೆಯ ಬಗ್ಗೆಯೂ ಅವರಿಗೆ ಮನವರಿಕೆ ಮಾಡಿಕೊಡಿ. ನೀವು ಅವರನ್ನು ನಿರ್ಲಕ್ಷಿಸಿದ್ದಕ್ಕೆ ಮತ್ತು ದೂರುಕೊಟ್ಟಿದ್ದಕ್ಕೆ ಪ್ರತಿಯಾಗಿ ಅವರು ಏನು ಮಾಡಿದರೂ ಸಹಿಸಿಕೊಳ್ಳುವುದಾಗಿಯೂ, ಆದರೆ ಅವರನ್ನು ಪ್ರೀತಿಸುವುದನ್ನು ಮಾತ್ರ ಬಿಡುವುದಿಲ್ಲವಾಗಿಯೂ ಕೆಲವು ಹೃದಯಕ್ಕೆ ನಾಟುವಂತಹ ಡೈಲಾಗ್ಸ್ ಬಿಡಿ. ಎಷ್ಟು ದಿನಾಂತ ಅವರು ನಿಮ್ಮಿಂದ ದೂರ ಇರುತ್ತಾರೆ? ಸೆಕ್ಸ್ ಬಯಸಿ ಹತ್ತಿರ ಬಂದಾಗಲೂ ಪ್ರೀತಿಯಿಂದಲೇ ಸಹಕರಿಸಿ. ದ್ವೇಷದ ಜ್ವಾಲೆ ಅದಾಗಿಯೇ ತಣ್ಣಗಾಗುತ್ತದೆ. ಎಂದೂ ತಾಳ್ಮೆ ಕಳೆದುಕೊಳ್ಳಬೇಡಿ. ನಿಮ್ಮ ನಡುವಿದ್ದ ಮೋಡಸರಿದು ಬೆಳಕು ಖಂಡಿತಾ ಮೂಡುತ್ತದೆ. ಆಲ್ ದಿ ಬೆಸ್ಟ್.