ಆಕೆ ನನಗಿಷ್ಟ; ಆದರೆ ಮದುವೆಯಾಗಲಾಗುತ್ತಿಲ್ಲ

ಪ್ರ : ಮೂರು ವರ್ಷದಿಂದ ಅವಳ ಜೊತೆ ಸಂಬಂಧದಲ್ಲಿ ಇದ್ದೇನೆ. ಅವಳು ನನ್ನ ಕಲೀಗ್. ಈ ಊರಿನಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿ ಇದ್ದಾಳೆ. ನಾವಿಬ್ಬರೂ ಒಬ್ಬರನ್ನೊಬ್ಬರು ಬಹಳವಾಗಿ ಹಚ್ಚಿಕೊಂಡಿದ್ದೇವೆ. ಆದರೇನು ಮಾಡುವುದು ಅವಳ ಜಾತಿ ಬೇರೆಯಾದ್ದರಿಂದ ನಮ್ಮ ಮನೆಯವರು ಮದುವೆಗೆ ಒಪ್ಪುತ್ತಿಲ್ಲ. ಅವರಿಬ್ಬರಿಗೂ ವಯಸ್ಸಾದ್ದರಿಂದ ಅವರ ಮನಸ್ಸಿಗೆ ನೋವು ಕೊಡುವುದೂ ಕಷ್ಟ. ನನ್ನನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದಾರೆ. ಅವರೀಗ ನನಗೆ ಬೇರೆ ಹುಡುಗಿಯನ್ನು ನೋಡಿದ್ದಾರೆ. ಅವಳನ್ನೇ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ. ನನ್ನ ಹುಡುಗಿಗೂ ಈ ವಿಷಯ ಗೊತ್ತು. ನಾವಿಬ್ಬರೂ ಇನ್ನು ಬೇರೆಯಾಗೋಣ ಅಂತ ಹಲವು ಸಲ ಇಬ್ಬರೂ ಬಾಯಲ್ಲಿ ಹೇಳಿಕೊಂಡರೂ ಅದ್ಯಾಕೋ ಗೊತ್ತಿಲ್ಲ ನಾವು ಮತ್ತಷ್ಟು ಹತ್ತಿರವಾಗುತ್ತೇವೆ, ಅಂತಹ ಸಮಯದಲ್ಲಿ ಇಬ್ಬರೂ ಇಮೋಶನಲ್ಲಾಗಿ ನಮ್ಮ ಮಧ್ಯೆ ಸೆಕ್ಸೂ ನಡೆದುಹೋಗುತ್ತದೆ. ಅವಳು ನನ್ನ ಮೆಲೆ ಪ್ರಾಣವನ್ನೇ ಇಟ್ಟುಕೊಂಡಿದ್ದಾಳೆ. ಮನೆಯವರ ಬಲವಂತಕ್ಕೆ ನಾವಿಬ್ಬರೂ ಬೇರೆಯವರನ್ನು ಮದುವೆಯಾದರೂ ನಮ್ಮ ಈ ರಿಲೇಶನ್‍ಶಿಪ್ಪನ್ನು ಹೀಗೇ ಇಟ್ಟುಕೊಳ್ಳಬೇಕೆನ್ನುವುದು ಅವಳ ಆಸೆ. ಬೇರೆ ಮದುವೆಯಾದ ನಂತರ ಈ ರೀತಿಯ ಸಂಬಂಧ ಇಟ್ಟುಕೊಂಡರೆ ನನ್ನ ಹೆಂಡತಿಯಾಗುವವಳಿಗೆ ಮೋಸ ಮಾಡಿದಂತಾಗುವುದಿಲ್ಲವೇ? ಒಟ್ಟೂ ಇವಳಿಂದ ದೂರ ಹೋಗಲಾರದೇ ಒದ್ದಾಡುತ್ತಿದ್ದೇನೆ. ಸಲಹೆ ಕೊಡಿ ಪ್ಲೀಸ್.

: ಶಾಸ್ತ್ರವೂ ಆಗಬೇಕು. ಸುಖವೂ ಆಗಬೇಕು ಅಂದರೆ ಹೇಗೆ? ನಿಮಗೆ ಪ್ರೀತಿಯೂ ಬೇಕು. ಮನೆಯವರಿಂದ ಆದರ್ಶ ಪುತ್ರನೆಂದು ಹೇಳಿಸಿಕೊಳ್ಳಲೂ ಬೇಕು ಅಂದರೆ ಪ್ರಾಮಾಣಿಕರಿಗೆ ಇದೆರಡೂ ಏಕಕಾಲದಲ್ಲಿ ಕಷ್ಟವೇ. ನಿಮ್ಮಿಬ್ಬರಿಗೂ ಈಗ ಇರುವುದು ಬರೀ ದೈಹಿಕ ಆಕರ್ಷಣೆ ಮಾತ್ರವಾಗಿದ್ದರೆ ಮಾತ್ರ ನೀವಿಬ್ಬರೂ ಬೇರೆ ಮದುವೆಯಾದರೂ ಈ ಸಂಬಂಧವನ್ನು ಮುಂದುವರಿಸಲು ಸಾಧ್ಯವಷ್ಟೇ. ನೀವಿಬ್ಬರೂ ನಿಜವಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರೆ, ಒಂದೇ ಪ್ರೀತಿಗಾಗಿ ಎಲ್ಲವನ್ನೂ ಎದುರಿಸಲು ಸಿದ್ದರಾಗಿರುತ್ತಿದ್ದಿರಿ. ಇಲ್ಲಾ ವಾಸ್ತವಿಕತೆಯನ್ನು ಒಪ್ಪಿಕೊಂಡು ಪ್ರೀತಿಯನ್ನೇ ತ್ಯಾಗಮಾಡಲು ಮುಂದಾಗುತ್ತಿದ್ದಿರಿ. ಮದುವೆಯಾಗಲು ಕಷ್ಟಸಾಧ್ಯ ಅಂತ ಗೊತ್ತಿದ್ದರೂ ನೀವು ದೈಹಿಕವಾಗಿ ಈ ರೀತಿ ಮುಂದುವರಿಯುತ್ತಿರಲಿಲ್ಲ. ನಿಮ್ಮಿಬ್ಬರಿಗೂ ಬಿಟ್ಟಿರಲು ಸಾಧ್ಯವೇ ಇಲ್ಲವಾದರೆ ಮನೆಯವರನ್ನು ಹೇಗಾದರೂ ಒಪ್ಪಿಸಿ ಮದುವೆಯಾಗಿ. ಅವಳಿಲ್ಲದಿದ್ದರೆ ನೀವು ಜೀವನಪೂರ್ತಿ ಮದುವೆಯನ್ನೇ ಆಗುವುದಿಲ್ಲ ಅಂತ ಹಠ ಹಿಡಿದು ಕುಳಿತುಬಿಡಿ. ಹಾಗೆ ಮಾಡಲು ನಿಮಗೆ ಅಸಾಧ್ಯವಾದರೆ ಮನೆಯವರ ಮಾತಿಗೆ ಬೆಲೆಕೊಟ್ಟು ಅವರ ಇಷ್ಟದಂತೆ ನಡೆಯಿರಿ. ಆದರೆ ಬೇರೆ ಮದುವೆಯನ್ನೂ ಆಗಿ ಈ ಸಂಬಂಧವನ್ನೂ ಮುಂದುವರಿಸುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಅದು ಅನೈತಿಕತೆ ಮಾತ್ರವಲ್ಲ, ಆ ರೀತಿ ಮುಂದುವರಿದರೆ ಒಂದಲ್ಲ ಒಂದು ದಿನ ಇಬ್ಬರ ಸಂಸಾರದಲ್ಲೂ ಬಿರುಗಾಳಿ ಏಳುವುದು ಖಚಿತ.