ಅವನು ಮಾಜಿ ಪ್ರೇಮಿಯ ಬಗ್ಗೆಯೇ ಮಾತಾಡುತ್ತಿರುತ್ತಾನೆ

ಪ್ರ : ಕೆಲವು ಸಮಯಗಳ ಹಿಂದೆಯಷ್ಟೇ ಅವನು ನನ್ನ ಜೀವನ ಪ್ರವೇಶಿಸಿದ್ದು. ನಮ್ಮಿಬ್ಬರದೂ ಒಂದೇ ತೆರನ ಸಮಸ್ಯೆಯಿರುವುದರಿಂದಲೋ ಏನೋ ಹತ್ತಿರವಾದೆವು. ನನಗೆ ಮೊದಲೊಬ್ಬ ಬಾಯ್‍ಪ್ರೆಂಡ್ ಇದ್ದ. ಬೇರೆ ಹುಡುಗಿಯ ಸೆಳೆತಕ್ಕೆ ಒಳಗಾಗಿ ನನಗೆ ಕೈಕೊಟ್ಟ. ನನ್ನ ಈಗಿನ ಹುಡುಗನಿಗೂ ಒಬ್ಬಳು ಲವ್ವರ್ ಇದ್ದಳು. ಅವರಿಬ್ಬರಿಗೂ ಯಾವುದೋ ವಿಷಯಕ್ಕೆ ಜಗಳವಾಗಿ ದೂರವಾಗಿದ್ದರು. ಸಂಗಾತಿಗಳಿಂದ ದೂರವಾಗಿದ್ದ ನಾವಿಬ್ಬರೂ ಒಬ್ಬರಿಗೊಬ್ಬರು ಸಾಂತ್ವಾನ ಹೇಳುತ್ತಾ ನಮಗರಿವಿಲ್ಲದಂತೆ ಜೊತೆಯಾದೆವು. ಈಗ ನಮ್ಮ ಈ ಹೊಸ ಸಂಬಂಧಕ್ಕೆ ಮೂರು ತಿಂಗಳಾದವು. ನಾನಂತೂ ಮೊದಲಿನ ಹುಡುಗನನ್ನು ಮರೆತು ಹೊಸಜೀವನ ಪ್ರಾರಂಭಿಸಲು ನನ್ನ ಮನಸ್ಸನ್ನು ಸಿದ್ಧಗೊಳಿಸಿಕೊಂಡಿದ್ದೇನೆ. ಆದರೆ ಒಂದೇ ಸಮಸ್ಯೆಯೆಂದರೆ ನನ್ನ ಈ ಹುಡುಗ ಇಡೀ ಹೊತ್ತೂ ತನ್ನ ಮಾಜೀ ಪ್ರೇಮಿಯ ಬಗ್ಗೆಯೇ ಹೇಳುತ್ತಿರುತ್ತಾನೆ. ಅವನಿಗೆ ಈಗ ಅವಳ ಬಗ್ಗೆ ಲವ್ ಉಳಿದಿಲ್ಲವಂತೆ. ಆದರೂ ಅವಳ ಜೊತೆಗೆ ಕಳೆದ ವಿಷಯಗಳನ್ನೆಲ್ಲ ಹೇಳುತ್ತಿರುತ್ತಾನೆ. ಅವಳು ಬೆಡ್‍ನಲ್ಲಿ ಯಾವ ರೀತಿ ಇರುತ್ತಿದ್ದಳು, ಅವಳಿಗೆ ಸೆಕ್ಸ್ ಬಗ್ಗೆ ಇದ್ದ ಆಸಕ್ತಿ ಎಲ್ಲವನ್ನೂ ಹೇಳುತ್ತಿರುತ್ತಾನೆ. ಅವನು ಡೈರೆಕ್ಟಾಗಿ ನನ್ನ ಬಳಿ ಸೆಕ್ಸ್ ಅಪೇಕ್ಷಿಸಿರದಿದ್ದರೂ ಅವನಿಗೆ ಅದು ಬೇಕಾಗಿದೆ ಅಂತ ನನಗೆ ಗೊತ್ತು. ಆದರೆ ಮೊದಲ ಪ್ರೇಮಿ ಜೊತೆಯೂ ನಾನು ಆ ಬಗ್ಗೆ ಅಂತರ ಕಾದುಕೊಂಡಿದ್ದೆ. ಈಗಲೂ ನನಗೆ ಆ ರಿಸ್ಕ್ ಬೇಡ ಅನ್ನುವ ಭಾವನೆಯೇ ಇದೆ. ಆದರೆ ಈ ಹುಡುಗ ತನ್ನ ಮಾಜೀ ಗೆಳತಿಯ ಜೊತೆಗಿನ ಸೆಕ್ಸ್ ಜೀವನವನ್ನು ರಸವತ್ತಾಗಿ ಹೇಳಿ ನನಗೆ ಕಿರಿಕಿರಿ ಉಂಟುಮಾಡುತ್ತಿದ್ದಾನೆ. ಒಳಗೊಳಗೇ ಅಸುರಕ್ಷತೆಯ ಭಾವನೆಯೂ ಮೂಡುತ್ತಿದೆ. ಈ ಹುಡುಗನನ್ನು ಎಷ್ಟರಮಟ್ಟಿಗೆ ನಂಬಬಹುದು?

: ಒಂದು ರೀತಿ ವಿಚಿತ್ರ ವ್ಯಕ್ತಿತ್ವ ಉಳ್ಳವನೇನೋ ನಿಮ್ಮ ಈ ಬಾಯ್‍ಫ್ರೆಂಡ್. ಅವನು ನಿಮ್ಮ ಪ್ರೀತಿಗೆ ಅರ್ಹನೋ ಅಲ್ಲವೋ ಅನ್ನುವ ಅನುಮಾನವೂ ಬರುತ್ತಿದೆ. ಅವನು ಹುಡುಗಿಯರಿಂದ ಬಯಸುವುದು ಪ್ರೀತಿಗಿಂತ ಹೆಚ್ಚಾಗಿ ಸೆಕ್ಸ್‍ನ್ನೇ ಅಂತ ಅವನ ಈ ವರ್ತನೆಯಿಂದ ಯಾರಿಗಾದರೂ ಅರ್ಥವಾಗುತ್ತದೆ. ಅವನು ನಿಮ್ಮಿಂದಲೂ ಅದನ್ನೇ ಬಯಸುವುದರಿಂದಲೇ ಆ ಕುರಿತೇ ಹೆಚ್ಚಾಗಿ ಮಾತಾಡುತ್ತಿರಬಹುದು. ತನ್ನ ಮಾಜೀ ಪ್ರೇಮಿಯೊಂದಿಗೆ ತಾನು ಅನುಭವಿಸಿದ ಸೆಕ್ಸ್ ಸುಖದ ಬಗ್ಗೆ ಮಾತಾಡಿ ನಿಮ್ಮಲ್ಲಿ ಕೀಳರಿಮೆ ಮೂಡಿಸುವುದು ಅವನ ಉದ್ದೇಶ ಇರಬಹುದು. ನೀವೂ ತಾನೇನು ಕಡಿಮೆ ಅಂತ ಅವನ ಜೊತೆ ಹಾಸಿಗೆ ಹಂಚಿಕೊಳ್ಳಲಿ ಅನ್ನುವ ಉದ್ದೇಶದಿಂದಲೇ ಅವನು ಈ ರೀತಿ ಮಾತಾಡುತ್ತಿದ್ದಾನೆ. ನಿಷ್ಕಲ್ಮಶ ಪ್ರೀತಿಯಿದ್ದರೆ ಅಲ್ಲಿ ವಿವಾಹಪೂರ್ವ ಸೆಕ್ಸ್ ಇರುವುದಿಲ್ಲ. ಸೆಕ್ಸ್‍ಗೋಸ್ಕರವೇ ಪ್ರೀತಿಯ ನಾಟಕವಾಡುವವರು ಮಾತ್ರ ಅದನ್ನೇ ಮೊದಲು ಬಯಸುವುದು. ಯಾವುದಕ್ಕೂ ನೀವು ಹುಶಾರಾಗಿರಿ. ಅವನು ಬಯಸುತ್ತಾನೆ ಅಂತ ನೀವು ಸಲುಗೆ ಕೊಡಲು ಹೋಗದಿರಿ. ನಿಮ್ಮ ನಿಲುವನ್ನು ಅವನಿಗೆ ಮೊದಲು ಸ್ಪಷ್ಟಪಡಿಸಿ. ಅವನ ಮಾಜೀಪ್ರೇಮಿಯ ಬಗ್ಗೆ ಇಡೀ ಹೊತ್ತು ಹೇಳಿದರೆ ನಿಮಗೆ ಕಿರಿಕಿರಿಯಾಗುವ ವಿಷಯವನ್ನೂ ಮುಲಾಜಿಲ್ಲದೇ ಹೇಳಿ. ನಿಜವಾಗಿ ಅವನಿಗೆ ನೀವು ಬೇಕೆಂದೇ ಇದ್ದರೆ ನಿಮ್ಮ ಭಾವನೆಯನ್ನು ಆತ ಗೌರವಿಸುತ್ತಾನೆ.