“ಅವನು ಹಿಂದಿನಿಂದ ಬಂದು ನನ್ನ ಎದೆ ಹಿಡಿದುಕೊಂಡ, ನಾನು ನಡುಗುತ್ತಿದ್ದೆ”

ಸೋನಂ ಕಪೂರ್ ಕೆಲವು ದಿನಗಳ ಹಿಂದಷ್ಟೇ ತಾನು ಚಿಕ್ಕವಳಿರುವಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಹೇಳಿ ಎಲ್ಲರಿಗೂ ಶಾಕ್ ನೀಡಿದ್ದಳು. ಈ ಬಗ್ಗೆ ಈಗ ಇನ್ನಷ್ಟು ವಿವರ ಬಿಚ್ಚಿಟ್ಟಿದ್ದಾಳೆ.
“ಪ್ರತೀ ದಿನ ಹುಡುಗಿಯರು ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಶೋಷಣೆಗೆ ಒಳಗಾಗುತ್ತಲೇ ಇರುತ್ತಾರೆ. ನಾನೂ ಆ ನೋವು ಅನುಭವಿಸಿದ್ದೆ. ನನಗಾಗ 14 ವರ್ಷ. ಆ ಘಟನೆ ನನಗಿನ್ನೂ ನೆನಪಿದೆ” ಎನ್ನುತ್ತಾ “ಆ ದಿನ ನಾವು ಸ್ನೇಹಿತೆಯರೆಲ್ಲ ಸೇರಿಕೊಂಡು ಅಕ್ಷಯ್ ಕುಮಾರ್ ಹಾಗೂ ರವೀನಾ ಟಂಡನ್ ಸಿನಿಮಾ ನೋಡಲು ಮುಂಬೈನ ಗ್ಯಾಲೆಕ್ಸಿ ಥಿಯೇಟರಿಗೆ ಹೋಗಿದ್ದೆವು. ಮಧ್ಯೆ ಇಂಟರ್ವಲ್ಲಿನಲ್ಲಿ ನಾವು ಹೊರಗೆ ಹೋಗಿ ಸಮೋಸಾ ತೆಗೆದುಕೊಂಡು ಸಿನಿಮಾ ಹಾಲಿಗೆ ಹಿಂದಿರುಗುವಾಗ ನಾನೆಲ್ಲರಿಗಿಂತ ಹಿಂದಿದ್ದೆ. ಯಾರೋ ಒಬ್ಬಾತ ಅಚಾನಕ್ಕಾಗಿ ಹಿಂದಿನಿಂದ ನನ್ನನ್ನು ಬಳಸಿ ನನ್ನ ಎದೆ ಹಿಡಿದುಕೊಂಡ. ಏನಾಗುತ್ತಿದೆ ಎಂದು ಗೊತ್ತಾಗದೇ ನಾನು ನಡುಗುತ್ತಿದ್ದೆ. ನಂತರ ಸಿನಿಮಾದುದ್ದಕ್ಕೂ ನಾನು ಅಳುತ್ತಲೇ ಇದ್ದೆ. ಏನೋ ಆಗಬಾರದ್ದು ಆಗಿಹೋಗಿದೆ ಎನ್ನುವ ನೋವು ಸುಮಾರು ವರ್ಷಗಳ ಕಾಲ ನನ್ನನ್ನು ಕಾಡುತ್ತಿತ್ತು. ಇಂತಹ ಅನುಭವ ಹಲವು ಹುಡುಗಿಯರಿಗೆ ಆಗಿರಬಹುದು” ಎಂದು ತಾನನುಭವಿಸಿದ ನೋವನ್ನು ಹಂಚಿಕೊಂಡಿದ್ದಾಳೆ ಸೋನಂ.
ಒಬ್ಬಳು ಸೆಲೆಬ್ರಿಟಿಯಾಗಿ ಸೋನಂ ಹೀಗೆ ಓಪನ್ನಾಗಿ ಈ ವಿಷಯ ಹೇಳಿಕೊಂಡು ಹುಡುಗಿಯರಲ್ಲಿ ಜಾಗೃತಿ ಮೂಡಿಸಿದ್ದಕ್ಕೆ ಶಹಬ್ಬಾಸ್ ಎನ್ನುತ್ತಿದೆ ಚಿತ್ರರಂಗ. ಈ ವರ್ಷ ಆಕೆ ನಟಿಸಿರುವ `ನೀರ್ಜಾ’ ಚಿತ್ರಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದ್ದು ಆಕೆಗೆ ಹಲವು ಪ್ರಶಸ್ತಿಗಳು ಸಿಗುವ ನಿರೀಕ್ಷೆ ಇದೆ.