ಆತನಿಗೆ ಈಗ ನಾನು ಬೇಡವಂತೆ

ಪ್ರ : ಅವನು ಕಾಲೇಜಿನಲ್ಲಿ ತುಂಬಾ ಫೇಮಸ್ ಆಗಿದ್ದ. ಓದುವುದರಲ್ಲಿ, ಇತರ ಚಟುವಟಿಕೆಗಳಲ್ಲಿ ಎಲ್ಲದರಲ್ಲೂ ಅವನು ಮುಂದೆ. ನೋಡಲೂ ಸ್ಮಾರ್ಟ್ ಇರುವ ದಿನಕ್ಕೊಂದು ಡ್ರೆಸ್ ಮಾಡಿಕೊಂಡು ಗಾಗಲ್ಸ್ ಹಾಕಿ ಬರುವ ಅವನ ಸ್ನೇಹ ಸಂಪಾದಿಸಲು ಎಲ್ಲ ಹುಡುಗಿಯರೂ ಮುಗಿಬೀಳುತ್ತಿದ್ದರು. ನಾನೂ ಅವನನ್ನು ಮನದಲ್ಲೇ ಇಷ್ಟ ಪಟ್ಟರೂ ಅದನ್ನು ತೋರ್ಪಡಿಸಿಕೊಳ್ಳದೇ ಗಂಭೀರವಾಗಿರುತ್ತಿದ್ದೆ. ನನ್ನ ಸ್ಮೈಲಿಗಾಗಿ ಕಾತರಿಸುವ ಹಲವು ಹುಡುಗರಿದ್ದರೂ ನಾನು ಅವರ್ಯಾರ ಜೊತೆಯೂ ಬೆರೆಯುತ್ತಿರಲಿಲ್ಲ. ಬಹುಶಃ ಆ ಗುಣವೇ ಅವನನ್ನು ನನ್ನ ಹತ್ತಿರ ಸೆಳೆದಿರಬೇಕು. ನನ್ನ ಫಾಲೋ ಮಾಡಿ ಗೆಳೆತನ ಬೆಳೆಸಿದ. ನಮ್ಮ ಜೋಡಿ ಕ್ಯಾಂಪಸ್ಸಿನಲ್ಲೇ ಫೇಮಸ್ ಆಗಿತ್ತು. ಲವ್ ಬೆಳೆಯಲು ಹೆಚ್ಚು ಸಮಯ ತಗಲಲಿಲ್ಲ . ಈಗ ಇಬ್ಬರೂ ಕಾಲೇಜ್ ಮುಗಿಸಿ ಬೇರೆ ಬೇರೆ ಕಡೆ ಕೆಲಸದಲ್ಲಿ ಇದ್ದೇವೆ. ಈಗ ಅವನು ನನಗೆ ಸಿಗುವುದೂ ಕಡಿಮೆ. ಅದೂ ಅಲ್ಲದೇ ಸಿಕ್ಕಿದರೂ ಮೊದಲಿನ ಹಾಗೆ ಅವನು ನನ್ನ ಹತ್ತಿರ ಮಾತಾಡುತ್ತಿಲ್ಲ. ನನಗೆ ಅವನ ಮೇಲೆ ಮೊದಲಿನ ಹಾಗೇ ಪ್ರೀತಿ ಇದೆ. ಆತನಿಗೆ ಈಗ ನಾನು ಬೋರ್ ಆಗಿದ್ದೇನಂತೆ. ನನ್ನ ಮೇಲೆ ಮೊದಲಿನ ಆಕರ್ಷಣೆಯೂ ಅವನಿಗಿಲ್ಲವೆಂದು ಕಳೆದ ಬಾರಿ ಸಿಕ್ಕಿದಾಗ ನೇರವಾಗಿಯೇ ಹೇಳಿದ. ನನಗೆ ಅವನನ್ನು ಮರೆಯುವುದೇ ಕಷ್ಟ. ಈಗ ನಾನು ಏನು ಮಾಡಲಿ?

: ಟೀನೇಜರ್ ಲವ್ ಅಂದರೆ ಹೆಚ್ಚಿನದು ಹಾಗೇನೇ. ಅದರಲ್ಲಿ ಪ್ರೀತಿಗಿಂತ ಸೆಳೆತ ಜಾಸ್ತಿ. ಹೆಚ್ಚಿನ ಕೇಸಿನಲ್ಲಿ ಹುಡುಗ/ಹುಡುಗಿಗೆ ಗರ್ಲ್‍ಫ್ರೆಂಡ್/ಬಾಯ್‍ಫ್ರೆಂಡ್ ಇರುವುದು ಪ್ರೆಸ್ಟೀಜ್ ಸಿಂಬಲ್ ಅಷ್ಟೇ. ಒಮ್ಮೆ ಕಾಲೇಜು ಮುಗಿದು ಇಬ್ಬರ ದಾರಿಯೂ ಬೇರೆಯಾದ ನಂತರ ಅವರ ಪ್ರಯೋರಿಟಿಯೂ ಬದಲಾಗುತ್ತದೆ. ಕಾಲೇಜಿನಲ್ಲಿದ್ದಾಗ ಇರುವ ಎಳೆಸಲು ಮನಸ್ಸು ಆಗಿರುವುದಿಲ್ಲ. ಅವರಿಗೆ ಮೊದಲಿನದ್ದೆಲ್ಲ ಸಿಲ್ಲಿ ಆಗಿ ಕಾಣುವ ಸಾಧ್ಯತೆ ಸಹ ಇರುತ್ತದೆ. ಹೊಸಪರಿಸರದಲ್ಲಿ ಹೊಸ ಪ್ರೀತಿ ಚಿಗುರಲೂ ಬಹುದು. ಹುಡುಗ-ಹುಡುಗಿ ಇಬ್ಬರೂ ತಮ್ಮ ಕಾಲೇಜು ದಿನಗಳಲ್ಲಿ ಮಾಡಿದ ಪ್ರೀತಿಯನ್ನು ಸೀರಿಯಸ್ಸಾಗಿ ತೆಗೆದುಕೊಂಡರೆ ಅಥವಾ ಇಬ್ಬರೂ ಅದರ ಬಗ್ಗೆ ಹೆಚ್ಚು ಕೇರ್ ಮಾಡದಿದ್ದರೆ ತೊಂದರೆ ಇಲ್ಲ. ಒಬ್ಬರು ಆ ಪ್ರೀತಿಯನ್ನು ನೆಚ್ಚಿಕೊಂಡು ಇನ್ನೊಬ್ಬರು ಲೈಟಾಗಿ ತೆಗೆದುಕೊಂಡರೆ ಕಷ್ಟ . ಈಗ ಆ ಹುಡುಗ ನಿಮ್ಮ ಮೇಲೆ ಪ್ರೀತಿಯೇ ಇಲ್ಲ ಅಂತ ನೇರವಾಗಿ ಹೇಳಿದ ನಂತರವೂ ಅವನ ಹಿಂದೆ ಬಿದ್ದು ಹೋಗಲು ನಿಮಗೇನು ಆತ್ಮಾಭಿಮಾನ ಇಲ್ಲವಾ? ಅವನು ನಿಮಗೆ ತಕ್ಕವನೇ ಅಲ್ಲ . ನಿಮ್ಮ ಪ್ರೀತಿಯನ್ನು ಪಡೆಯಲು ಅವನಿಗೆ ಯೋಗ್ಯತೆಯೇ ಇಲ್ಲ ಅಂತ ಅವನಿಂದ ದೂರವಿರುವುದೇ ಒಳ್ಳೆಯದು. ಸ್ವಲ್ಪ ಕಷ್ಟವಾಗುತ್ತದೆ. ಆದರೆ ಬೇರೆ ದಾರಿ ಇಲ್ಲ. ನಿಮ್ಮ ಕೆಲಸ ಕಾರ್ಯದಲ್ಲಿ, ಹೊಸ ಪರಿಸರದಲ್ಲಿ, ಹೊಸ ಹೊಸ ಜನರನ್ನು ಭೇಟಿಯಾಗುವಾಗ ಮತ್ತು ಅವರ ಜೊತೆ ಸ್ನೇಹ ಚಿಗುರಿದಾಗ ಕ್ರಮೇಣ ಅವನು ನಿಮ್ಮ ಮನಸ್ಸಿಂದ ಮಾಸಿ ಹೋಗುತ್ತಾನೆ. ಯಾವುದಕ್ಕೂ ಹೆಚ್ಚು ಸೆಂಟಿಮೆಂಟಲ್ ಆಗದೇ ಪ್ರಾಕ್ಟಿಕಲ್ಲಾಗಿ ಯೋಚಿಸಿ.