ಅಡಿಕೆ ಬೆಳೆಗಾರರಿಗೆ ರಾಜ್ಯ, ಕೇಂದ್ರ ಸರ್ಕಾರದಿಂದ ಅನ್ಯಾಯ : ಎಚ್ಡೀಕೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : “ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದು, ಬೆಂಬಲ ಬೆಲೆ ನೀಡಿದ್ದು ಅವೈಜ್ಞಾನಿಕವಾಗಿದೆ. ನಿಜವಾಗಿ ಅಡಿಕೆ ಬೆಳೆಗಾರರ ಬಗ್ಗೆ ಕಾಳಜಿ ಇದ್ದರೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬಹುದಿತ್ತು. ಅಡಿಕೆ ಬೆಳೆಗಾರರಿಗೆ ರಾಜ್ಯ, ಕೇಂದ್ರ ಸರ್ಕಾರದಿಂದ ನ್ಯಾಯ ಸಿಗುತ್ತಿಲ್ಲ” ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಅವರು ಕಾರವಾರದಿಂದ ಹಾವೇರಿ ಹೋಗುವ ಮುನ್ನ ಶಿರಸಿಯಲ್ಲಿ ಜೆಡಿಎಸ್ ನಾಯಕರು ಸ್ವಾಗತಿಸಿದ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, “ಅಡಿಕೆಗೆ ನೀಡಿರುವ ಬೆಂಬಲ ದರ ಹೆಚ್ಚಬೇಕು. ರಾಜ್ಯದಿಂದ ಹೋದ ಸಂಸದರು ಅಡಿಕೆ ಬೆಳೆಗಾರರ ಪರ ಧ್ವನಿ ಎತ್ತಬೇಕು. ಅವರು ರೈತರ ಪರ, ಅಡಿಕೆ ಬೆಳೆಗಾರರಿಗೆ ನ್ಯಾಯ ಕೊಡಿಸಲು ಮುಂದಾಗುತ್ತಿಲ್ಲ” ಎಂದು ತಿಳಿಸಿದರು.

“ಕೇಂದ್ರದ ಬಿಜೆಪಿ, ರಾಜ್ಯದ ಕಾಂಗ್ರೆಸ್ ಸರ್ಕಾರವು ರೈತ ಪರವಾಗಿ ಇಲ್ಲ. ರೈತರಿಗೆ ತೊಂದರೆ ಕೊಡುವ ನೀತಿ ಮಾಡುತ್ತಿದೆ. ರೈತರು ಇಂತಹವರಿಗೆ ಆಶೀರ್ವಾದ ಮಾಡುವಾಗ ಅಗತ್ಯ ಎಚ್ಚರ ವಹಿಸಬೇಕು. ಕೇಂದ್ರ ಸರ್ಕಾರ ಶೇ 50ರಷ್ಟು ನೀಡಿದರೆ ಸಾಲ ಮನ್ನಾ ಮಾಡುವುದಾಗಿ ಹೇಳುವ ಮುಖ್ಯಮಂತ್ರಿ ತಮ್ಮ ಪಾಲಿನ ಶೇ 50ರಷ್ಟು ಸಾಲ ಮನ್ನಾ ಮಾಡಿ, ನಂತರ ಉಳಿದ ಶೇ 50ರಷ್ಟು ಕೊಡುವಂತೆ ಕೇಂದ್ರ ಸರ್ಕಾರದ ಎದುರು ಧರಣಿ ಮಾಡಿ ಹಣ ತರಬೇಕು. ಕೊಡಲು ಮನಸ್ಸಿಲ್ಲದೇ ಇಂತಹ ನಾಟಕ ಮಾಡಬಾರದು” ಎಂದರು.

“ಮೋದಿ ಅವರ ನೋಟು ಬ್ಯಾನಿನಿಂದ ಬಡವರು, ಜನಸಾಮಾನ್ಯರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಮದುವೆ ಮಾಡಲು ಆಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೇಶದಲ್ಲಿ ನೂರಾರು ಜನ ಸತ್ತರೂ ಪ್ರಧಾನಿ ಒಂದು ಸಂತಾಪವನ್ನು ಹೇಳಿಲ್ಲ. ಭ್ರಷ್ಟಾಚಾರಕ್ಕೆ ಪರೋಕ್ಷ ಬೆಂಬಲ ನೀಡುತ್ತಾ ಇನ್ನೊಂದೆಡೆ ಭ್ರಷ್ಟಾಚಾರ ವಿರೋಧಿ ಕ್ರಮ ಕೈಗೊಳ್ಳುವ ನಾಟಕದಿಂದ ಬಡವರಿಗೆ ತೊಂದರೆ ಆಗುತ್ತಿದೆ” ಎಂದರು.