ಮಸಾಜ್ ಪಾರ್ಲರ್ ವಿರುದ್ದ ದಾಳಿ : ಮನಪಾಕ್ಕೆ ಹೈ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಾನೂನುಬಾಹಿರವಾಗಿ ಮಸಾಜ್ ಪಾರ್ಲರ್‍ಗಳು ಕಾರ್ಯಾಚರಿಸುತ್ತಿವೆ ಎನ್ನುವ ಯಾವುದೇ ದಾಖಲೆಗಳೂ ಇಲ್ಲದೇ ಹೇಗೆ ಅವುಗಳ ಪರವಾನಗಿಯನ್ನು ರದ್ದುಗೊಳಿಸಿದ್ದೀರಿ ಎಂದು ರಾಜ್ಯ ಹೈಕೋರ್ಟ್ ಮಂಗಳೂರು ಮಹಾನಗರ ಪಾಲಿಕೆಯನ್ನು ಪ್ರಶ್ನಿಸಿದೆ.

ಮಂಗಳೂರಿನ ಮಸಾಜ್ ಪಾರ್ಲರ್ ಮಾಲಕರೊಬ್ಬರು ಸಲ್ಲಿಸಿದ ದೂರು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಜಸ್ಟೀಸ್ ವಿನೀತ್ ಕೊಠಾರಿ ಅವರು ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡರು.

ಯುವತಿಯರು ಮಸಾಜ್ ಸೆಂಟರುಗಳಲ್ಲಿ ಕಾರ್ಯನಿರ್ವಹಿಸಬಾರದು ಎನ್ನುವ ನಿಯಮ ಅಥವಾ ಕಾನೂನು ಏನಾದರೂ ಜಾರಿಯಲ್ಲಿದೆಯೇ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.

ತಮ್ಮ ಆಯುರ್ವೇದಿಕ್ ಥೆರಪಿ ಮಸಾಜ್ ಸೆಂಟರನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ ಎಂದು ಮುಚ್ಚಿಸಿ ಪರವಾನಗಿ ರದ್ದುಗೊಳಿಸಿ ಬೀಗ ಜಡಿದಿದ್ದಾರೆ ಎಂದು ಮಂಗಳೂರು ಮಹಾನಗರ ಪಾಲಿಕೆ ಕ್ರಮದ ವಿರುದ್ಧ ಪಾರ್ಲರ್ ಮಾಲಕರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಮಸಾಜ್ ಪಾರ್ಲರುಗಳ ವಿರುದ್ಧ ಸಾರ್ವಜನಿಕವಾಗಿ ವ್ಯಾಪಕವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ತಾವು ಈ ಕ್ರಮ ಕೈಗೊಂಡಿದ್ದೆವು ಎಂದು ಕಾರ್ಪೋರೇಶನ್ ತನ್ನ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿತ್ತು. “ಮಸಾಜ್ ಪಾರ್ಲರುಗಳಲ್ಲಿ ಅನಧಿಕೃತ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಾಕ್ಷಾಧಾರಗಳು ಸಿಕ್ಕಿದಲ್ಲಿ ಮಾತ್ರ ಕ್ರಮ ಕೈಗೊಳ್ಳಿ” ಎಂದು ಹೈಕೋರ್ಟ್ ಪಾಲಿಕೆಗೆ ಎಚ್ಚರಿಕೆ ನೀಡಿದೆ.