ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ರದ್ದುಗೊಳಿಸಿ ಹೈ ಆದೇಶ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿದ್ದು ಆರ್ಯಾಪು ನಿವಾಸಿ ಮೀನಾಕ್ಷಿ ಎಂಬುವವರು ವ್ಯವಸ್ಥಾಪನಾ ಸಮಿತಿ ರಚನೆಯ ವಿರುದ್ಧ ಹೈ ಮೆಟ್ಟಿಲೇರಿದ್ದರು. ಸಮಿತಿಯನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ.

ದೇವಳದ ವ್ಯವಸ್ಥಾಪನಾ ಸಮಿತಿ ರಚನೆಯ ವೇಳೆ ಚಾಲ್ತಿಯಲ್ಲಿರುವ ಸರಕಾರದ ಪರವಾಗಿರುವವರನ್ನೇ ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ. ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ರಚನೆಯಾದ ಸಮಿತಿಯಲ್ಲಿ ಬಹುತೇಕ ಬಿಜೆಪಿ ಪರ ಇರುವವರನ್ನೇ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ರಚನೆಯ ವೇಳೆ ರಾಜಕೀಯ ಮಾಡಲಾಗಿದೆ ಎಂದು ಮತ್ತು ಸಮಿತಿ ರಚನೆಯ ವೇಳೆ ಮಾಡಬೇಕಾದ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಆರ್ಯಾಪು ಗ್ರಾಮ ಪಂಚಾಯತ ಮಾಜಿ ಉಪಾಧ್ಯಕ್ಷೆ ಮೀನಾಕ್ಷಿ ಹೈಕೋರ್ಟಿಗೆ ದೂರು ನೀಡಿದ್ದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ ಆಯ್ಕೆಯಾಗಿದ್ದು ಸದಸ್ಯರನ್ನೊಳಗೊಂಡ ಸಮಿತಿಯ ನೇತೃತ್ವದಲ್ಲಿ ಕಳೆದ ಬಾರಿ ಜಾತ್ರೋತ್ಸವ ನಡೆದಿತ್ತು. ಈ ನಡುವೆ ನಾಗರಾಜ್ ಭಟ್ ರವರು ತನ್ನ ಸದಸ್ಯತನಕ್ಕೆ ಕೆಲವು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರು. ವ್ಯವಸ್ಥಾಪನಾ ಸಮಿತಿ ರಚನೆಯ ವೇಳೆ ಸದಸ್ಯತ್ವಕ್ಕಾಗಿ ಮೀನಾಕ್ಷಿ ಅರ್ಜಿ ಸಲ್ಲಿಸಿದ್ದರು. ಆದರೆ ಆಯ್ಕೆಯ ವೇಳೆ ಅವರನ್ನು ಕಡೆಗಣಿಸಲಾಗಿತ್ತು.

ಸದಸ್ಯರನ್ನು ಆಯ್ಕೆ ಮಾಡುವ ವೇಳೆ ನಿಯಮವನ್ನು ಪಾಲನೆ ಮಾಡಿಲ್ಲ ಮತ್ತು ಬಹುತೇಕರು ಬಿಜೆಪಿಯಲ್ಲಿ ಗುರುತಿಸಿಕೊಂಡವರೇ ಸಮಿತಿಯ ಸದಸ್ಯರಾಗಿದ್ದರು ಎನ್ನಲಾಗಿದೆ. ಹೈಕೋರ್ಟ್ ಹಾಲಿ ಸಮಿತಿಯನ್ನು ರದ್ದುಮಾಡಿರುವ ಹಿನ್ನೆಲೆಯಲ್ಲಿ ಹಾಲಿ ಸಮಿತಿಯವರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದು ಅಥವಾ ಸಮಿತಿಯಿಂದ ದೂರ ಉಳಿಯುವರೇ ಎಂಬುದನ್ನು ಕಾದು ನೋಡಬೇಕಿದೆ.