ಭಟ್ ವಿರುದ್ಧ ತನಿಖೆಗೆ ಹೈ ತಡೆ

ಬೆಂಗಳೂರು : ಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು  ಅನುಮತಿ ನೀಡಿದ್ದ ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ವಿಧಿಸಿದೆ. ತಮ್ಮ  ವಿರುದ್ಧ 2015ರಲ್ಲಿ ದಾಖಲಾಗಿರುವ ಎಫೈಆರ್ ರದ್ದುಗೊಳಿಸುವಂತೆ ಭಟ್ ಸಲ್ಲಿಸಿದ್ದ ಅಪೀಲಿನ  ವಿಚಾರಣೆ ನಡೆಸಿದ ಜಸ್ಟಿಸ್ ಅರವಿಂದ ಕುಮಾರ್ ಅವರನ್ನೊಳಗೊಂಡ ಪೀಠ ಈ ತಡೆಯಾಜ್ಞೆ ವಿಧಿಸಿದೆ.

ವಿವಿಧ ಧರ್ಮ, ಪಂಗಡಗಳ ನಡುವೆ ವೈರತ್ವವನ್ನು ಉತ್ತೇಜಿಸುವ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಐಪಿಸಿಯ ಸೆಕ್ಷನ್ 153ಎ ಹಾಗೂ ಸೆಕ್ಷನ್ 505(2) ಅನ್ವಯ ದಾಖಲಿಸಲಾಗಿದ್ದ ಪ್ರಕರಣಗಳ ಸಂಬಂಧ  ಕಾನೂನು ಕ್ರಮ ಕೈಗೊಳ್ಳಲು ಸರಕಾರ ಈ ಹಿಂದೆ ಅನುಮತಿ ನೀಡಿದ್ದರೆ, ಭಟ್ ಅದನ್ನು ಹಾಗೂ ತಮ್ಮ ವಿರುದ್ಧ ಪುತ್ತೂರಿನ ಅಶ್ರಫ್ ಎಂಬವರು ಸಲ್ಲಿಸಿದ ದೂರನ್ನು ಪ್ರಶ್ನಿಸಿ  ನ್ಯಾಯಾಲಯದ ಕದ ತಟ್ಟಿದ್ದರು.

ಭಟ್ ಅವರು  ವಿಶ್ವ ಹಿಂದು ಪರಿಷದ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನೀಡಿದ್ದ ಭಾಷಣಗಳು ಕೋಮು ಸಾಮರಸ್ಯವನ್ನು ಕೆದಕುವಂತಹುದ್ದಾಗಿತ್ತಲ್ಲದೆ ಮುಸ್ಲಿಂ ಸಮುದಾಯದ  ಭಾವನೆಗಳಿಗೂ ಘಾಸಿಯುಂಟು ಮಾಡಿತ್ತು ಎಂದು ಅಶ್ರಫ್ ದೂರಿದ್ದರು.

ಆದರೆ ರಾಜ್ಯ ಸರಕಾರ ತನ್ನ ವಿರುದ್ಧ ರಾಜಕೀಯ ಹಗೆ ತೀರಿಸುವುದಕ್ಕಾಗಿ  ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದೆ ಎಂದು ಭಟ್ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು. ತನಿಖಾ ಏಜನ್ಸಿ  ಸಂಗ್ರಹಿಸಿದ ಸಾಕ್ಷ್ಯಗಳನ್ನು ಹಾಗೂ ಭಾಷಣ ಸಂಬಂಧದ ಸೀಡಿಯನ್ನು ತಿರುಚಲಾಗಿತ್ತು ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸ್ಪಷ್ಟವಾಗಿ ತಿಳಿಸಿದೆ ಎಂದೂ ಅವರು ಹೇಳಿದ್ದರು.

ತಮ್ಮ ವಿರುದ್ಧದ ಆರೋಪಗಳನ್ನು ಪುಷ್ಠೀಕರಿಸಲು ಯಾವುದೇ ದಾಖಲೆಗಳಿಲ್ಲ ಹಾಗೂ ಪೊಲೀಸರು ಹಾಗೂ ಸರಕಾರ ವಿವೇಚನೆಯಿಂದ ವರ್ತಿಸಿಲ್ಲ ಎಂದು ಭಟ್ ಆರೋಪಿಸಿ  ತಮ್ಮ ವಿರುದ್ಧದ ಎಫೈಆರ್  ಹಾಗೂ  ಸರಕಾರದ ಆದೇಶವನ್ನು ರದ್ದುಗೊಳಿಸುವಂತೆ ಅಪೀಲು ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ವಾದ ಮಂಡಿಸಿದ ಭಟ್ ಪರ ವಕೀಲ ಅರುಣ್ ಶ್ಯಾಮ್ ತಮ್ಮ ಕಕ್ಷಿಗಾರ ತಮ್ಮ ಭಾಷಣಗಳಲ್ಲಿ ತಮ್ಮ ಅಭಿಪ್ರಾಯವನ್ನಷ್ಟೇ ವ್ಯಕ್ತಪಡಿಸಿದ್ದರು ಹಾಗೂ ರಾಜಕೀಯ ಒತ್ತಡದಿಂದ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಾದಿಸಿದ್ದರು.