ಸಂಪಾದಕರÀ ಬಂಧನಕ್ಕೆ ಹೈ ಕೋರ್ಟ್ ತಡೆ

ಬೆಂಗಳೂರು : ಹಕ್ಕುಚ್ಯುತಿ ಆರೋಪದ ಮೇಲೆ ವಿಧಾನಸಭೆಯಿಂದ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲ್ಪಟ್ಟಿರುವ ಇಬ್ಬರು ಸಂಪಾದಕರ ವಿರುದ್ಧ ಯಾವುದೇ ವ್ಯತಿರಿಕ್ತ ಕ್ರಮ ಕೈಗೊಳ್ಳಬಾರದೆಂದು ರಾಜ್ಯ ಸರಕಾರಕ್ಕೆ ಹಾಗೂ ಸಂಬಂಧಿತ ಇಲಾಖೆಗಳಿಗೆ ಹೈಕೋರ್ಟ್ ಬುಧವಾರ ಸೂಚಿಸಿದೆ.

`ಹಾಯ್ ಬೆಂಗಳೂರು’ ಸಂಪಾದಕ ರವಿ ಬೆಳಗೆರೆ ಹಾಗೂ `ಯಲಹಂಕ ವಾಯ್ಸ್’ ಸಂಪಾದಕ ಅನಿಲ್ ರಾಜ್ ಅವರು ಸಲ್ಲಿಸಿದ್ದ ಅಪೀಲುಗಳ ಮೇಲೆ ವಿಚಾರಣೆ ನಡೆಸಿದ  ಜಸ್ಟಿಸ್ ಎ ಎಸ್ ಬೋಪಣ್ಣ ಬುಧವಾರ ಮೇಲಿನಂತೆ ಮಧ್ಯಂತರ ಆದೇಶ ಹೊರಡಿಸಿದ್ದಾರೆ. ಅಪೀಲುದಾರರು ಹಾಗೂ ಪ್ರತಿವಾದಿಗಳಾದ ಸ್ಪೀಕರ್ ಕೆ ಬಿ ಕೋಳಿವಾಡ್ ಹಾಗೂ ಎರಡು ಪ್ರತ್ಯೇಕ ಹಕ್ಕುಬಾಧ್ಯತಾ ಸಮಿತಿಗಳ ಮುಖ್ಯಸ್ಥರಾದ ಎಸ್ ಆರ್ ವಿಶ್ವನಾಥ್ ಹಾಗೂ ಬಿ ಎಂ ನಾಗರಾಜ ಅವರಿಗೆ  ಪ್ರಕರಣದ ಸಂಬಂಧ ಸೂಕ್ತ ದಾಖಲೆಗಳನ್ನು ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶವನ್ನೂ ನ್ಯಾಯಾಲಯ ನೀಡಿದೆ.

ತಮ್ಮ ಟ್ಯಾಬ್ಲಾಯ್ಡುಗಳಲ್ಲಿ ಪ್ರಕಟಗೊಂಡ  ಲೇಖನಗಳು ಮಾನಹಾನಿಕಾರ ಹಾಗೂ ಸುಳ್ಳು ಎಂದು ಆರೋಪದ ಮೇಲೆ ತಮಗೆ ಶಿಕ್ಷೆ ವಿಧಿಸಿ ವಿಧಾನಸಭೆ ಹೊರಡಿಸಿದ್ದ ಆದೇಶದ ಸಂವಿಧಾನಬದ್ಧತೆಯನ್ನು ಇಬ್ಬರು ಸಂಪಾದಕರೂ ಪ್ರಶ್ನಿಸಿದ್ದರು. ಸದನವು ನವೆಂಬರ್ 21ರಂದು ಕೂಡ ತನ್ನ ಹಿಂದಿನ ಆದೇಶವನ್ನೇ ಪುನರುಚ್ಛರಿಸಿತ್ತು.