ಹಿಂದೂ -ಮುಸ್ಲಿಮರ ಮಧ್ಯೆ ಬಿರುಕಿಗೆ ಯತ್ನವೇ ?

ಮಮತಾಗೆ ಹೈಕೋರ್ಟ್ ತಪರಾಕಿ

ಕೋಲ್ಕತ್ತ : ಒಂದೇ ದಿನ ನಡೆಯಲಿರುವ ಮೊಹರಂ ಮತ್ತು ದಸರಾ ಪೂಜೆ ವಿಷಯದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಮಧ್ಯೆ ಬಿರುಕು ಮೂಡಿಸಲು ಪ್ರಯತ್ನಿಸಬೇಡಿ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಲ ಸರ್ಕಾರಕ್ಕೆ ಕಲ್ಕತ್ತ ಹೈಕೋರ್ಟ್ ಸೂಚಿಸಿದೆ.

ಸೆಪ್ಟೆಂಬರ್ 30 (ದಶಮಿ) ಮತ್ತು ಅಕ್ಟೋಬರ್ ಒಂದರಂದು ಮೊಹರಂ ಹಬ್ಬವಾಗಿರುವುದರಿಂದ ಸಂಜೆ 6 ಗಂಟೆ ಬಳಿಕ ದಸರಾ ದುರ್ಗಾ ಪೂಜಾ-ವಿಸರ್ಜನೆ ನಡೆಸದಂತೆ ಅವಕಾಶ ನಿರಾಕರಿಸಿ ಪಶ್ವಿಮ ಬಂಗಾಲ ಸರ್ಕಾರ ಇತ್ತೀಚೆಗೆ ಅಧಿಸೂಚನೆಯೊಂದು ಹೊರಡಿಸಿದ್ದು, ಇದನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ.

ಕೋಲ್ಕತ್ತದಲ್ಲಿ ಒಂದೇ ದಿನ ಎರಡು ಧರ್ಮಗಳ ಮೆರವಣಿಗೆ ನಡೆದಾಗ ಕೋಮುಗಲಭೆ ಅಥವಾ ಘರ್ಷನೆಗಳೇನಾದರೂ ನಡೆದಿದ್ದರೆ, ಪುರಾವೆ ನೀಡುವಂತೆ ಹೈಕೋರ್ಟ್ ವಿಭಾಗೀಯ ಪೀಠ ಸರ್ಕಾರಕ್ಕೆ ಸೂಚಿಸಿದೆ.

“ಎರಡು ಸಮುದಾಯದವರು ಒಟ್ಟಿಗೆ ಸಂಭ್ರಮಿಸಬಾರದೇ ? ಬಂಗಾಲವು ಕೋಮು ಸೌಹಾರ್ದತೆಯ ರಾಜ್ಯ ಎಂದು ಹೇಳುವ ನೀವೇ ಈಗ ಇಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ಮಧ್ಯೆ ಬಿರುಕು ಸೃಷ್ಟಿಗೆ ಕಾರಣರಾಗುತ್ತಿದ್ದೀರಾ ? ಎಲ್ಲರೂ ಸೌಹಾರ್ದತೆಯಿಂದ ಇರಲು ಬಿಡಿ” ಎಂದು ಕೋರ್ಟ್ ಹೇಳಿದೆ.

“ಒಂದೇ ದಿನ ಎರಡು ಮೆರವಣಿಗೆ ನಡೆದರೆ ಕೋಮು ಗಲಭೆ ನಡೆಯಬಹುದೆಂಬ ನಿಮ್ಮ ಊಹೆಗೆ ಆಧಾರಗಳೇನಾದರೂ ಇವೆಯೇ ? ಎರಡು ಮೆರವಣಿಗೆ ನಿರ್ವಹಿಸಲು ಪೊಲೀಸರು ಸಮರ್ಥರಿಲ್ಲವೇ ?” ಎಂದು ಕೋರ್ಟ್ ಪ್ರಶ್ನಿಸಿದೆ.