`ಕರಾವಳಿ ಅಲೆ’ ನಿರ್ದೇಶಕರ ವಿರುದ್ಧ ಪಾಲೆಮಾರ್ ಮಾನನಷ್ಟ ಕೇಸು ವಜಾಗೊಳಿಸಿದ ಹೈಕೋರ್ಟ್

Karavali Ale publisher & editor BV Seetaram and wife Rohini

ಬೆಂಗಳೂರು : `ಕರಾವಳಿ ಅಲೆ’ ಪತ್ರಿಕೆಯನ್ನು ಪ್ರಕಟಿಸುತ್ತಿರುವ ಚಿತ್ರಾ ಪಬ್ಲಿಕೇಶನ್ಸ್ ಪ್ರೈ ಲಿಮಿಟೆಡ್ ಇದರ ಅಧ್ಯಕ್ಷರು ಮತ್ತು ನಿರ್ದೇಶಕರಾಗಿರುವ ಬಿ ವಿ ಸೀತಾರಾಂ ಹಾಗೂ ಆಡಳಿತ ನಿರ್ದೇಶಕಿ  ರೋಹಿಣಿ ಸೀತಾರಾಂ ವಿರುದ್ಧ ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ವಜಾಗೊಳಿಸಿದೆ.

ತಮ್ಮ ವಿರುದ್ಧದ ಪ್ರಕರಣವನ್ನು ಕೈಬಿಡಬೇಕೆಂದು ಕೋರಿ ಸೀತಾರಾಂ ಹಾಗೂ ರೋಹಿಣಿ ಅವರು ಸಲ್ಲಿಸಿದ್ದ ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಜಸ್ಟಿಸ್ ಆನಂದ್ ಬೈರಾರೆಡ್ಡಿ ಮೇಲಿನ ಆದೇಶ ನೀಡಿದ್ದಾರೆ.

`ಕರಾವಳಿ ಅಲೆ’ ಪತ್ರಿಕೆಯಲ್ಲಿ ತಮ್ಮ ವಿರುದ್ಧ `ಸುಳ್ಳು ಹಾಗೂ ಮಾನಹಾನಿಕರ’  ಲೇಖನಗಳ ಸರಣಿಯನ್ನು ಆಗಸ್ಟ್ 2015 ಹಾಗೂ ಎಪ್ರಿಲ್ 2016ರ ನಡುವೆ ಪ್ರಕಟಿಸಲಾಗಿದೆ ಎಂದು ಪಾಲೆಮಾರ್ ಮಾಡಿರುವ  ದೂರನ್ನು ಪರಿಗಣಿಸಿ ಮಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಅರ್ಜಿದಾರರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಪಾಲೆಮಾರ್ ತಮ್ಮ ದೂರಿನಲ್ಲಿ ಸೀತಾರಾಂ ಮತ್ತು ರೋಹಿಣಿ ಅವರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದರಲ್ಲದೆ  ದೈನಿಕದ ಸುದ್ದಿಗಳನ್ನು ಅವರೇ ಸ್ವತಹ ಎಡಿಟ್ ಮಾಡುತ್ತಿದ್ದರು ಎಂದೂ ಆರೋಪಿಸಿದ್ದರು.

ಪತ್ರಿಕೆಯ ಸಂಪಾದಕರ ಹೆಸರನ್ನು ಮಾತ್ರ ದೈನಿಕದಲ್ಲಿ ಪ್ರಕಟಿಸಲಾಗುವುದರಿಂದಾಗಿ ಪ್ರೆಸ್ ಎಂಡ್ ರಿಜಿಸ್ಟ್ರೇಶನ್ಸ್ ಆಫ್ ಬುಕ್ಸ್ ಆಕ್ಟ್ 1867 ಅನ್ವಯ ಅವರೇ ಪತ್ರಿಕೆಯಲ್ಲಿ ಬರುವ ಸುದ್ದಿಗಳಿಗೆ ಜವಾಬ್ದಾರರೆಂದು ತಿಳಿದುಕೊಂಡು ಅವರ ವಿರುದ್ಧ ಕ್ರಿಮಿನಲ್ ಯಾ ಸಿವಿಲ್ ಪ್ರಕರಣ ದಾಖಲಿಸಬಹುದಾಗಿದೆಯಲ್ಲದೆ ಮುಖ್ಯ ಸಂಪಾದಕ, ಸ್ಥಾನೀಯ ಸಂಪಾದಕ  ಯಾ ಆಡಳಿತ ಸಂಪಾದಕರ ವಿರುದ್ಧವಲ್ಲವೆಂದು ಕೆ ಎಂ ಮ್ಯಾಥ್ಯೂ ಹಾಗೂ  ಕೆ ಎ ಅಬ್ರಹಾಂ ಅವರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆಯಾದರೂ  ಮುಖ್ಯ ಸಂಪಾದಕ, ಸ್ಥಾನೀಯ ಸಂಪಾದಕ ಹಾಗೂ ಆಡಳಿತ ಸಂಪಾದಕರೇ ಮಾನಹಾನಿಕರ ವರದಿಗಳನ್ನು ಪ್ರಕಟಿಸಿದ್ದಕ್ಕೆ ಕಾರಣರು ಎಂದು ದೂರುದಾರರು ಆರೋಪಿಸಿ ಅದನ್ನು  ಸಾಬೀತುಪಡಿಸಬಹುದಾಗಿದೆ  ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೇಳಿತ್ತು. ಆದರೆ ಪತ್ರಿಕೆಯ ನಿರ್ದೇಶಕರು ಅಥವಾ ಮಾಲಕರ ವಿರುದ್ಧ ಕೇಸು ದಾಖಲಿಸಲಾಗದು ಎಂದು ಹೈಕೋರ್ಟ್ ತೀರ್ಪಿತ್ತಿದೆ.

`ಪತ್ರಿಕೆಯೊಂದರಲ್ಲಿ ಸಂಪಾದಕರ ಹೆಸರನ್ನು ನೀಡುವುದೇ ಪ್ರಕಟವಾಗುವ ಸುದ್ದಿಗಳಿಗೆ ಅವರನ್ನು ಜವಾಬ್ದಾರರನ್ನಾಗಿಸಲು ಆಗಿರುವುದರಿಂದ’ ಕೆ ಎಂ ಮ್ಯಾಥ್ಯೂ  ಮತ್ತು ಕೆ  ಎ ಅಬ್ರಹಾಂ ನಡುವಣ ಪ್ರಕರಣದಲ್ಲಿನ ಸುಪ್ರೀಂ ಕೋರ್ಟ್ ತೀರ್ಪು  ಪ್ರಕಾಶನ ಸಂಸ್ಥೆಯೊಂದರ ಅಧ್ಯಕ್ಷರು, ನಿರ್ದೇಶಕರು ಅಥವಾ ಆಡಳಿತ ನಿರ್ದೇಶಕ ಹುದ್ದೆ ಹೊಂದಿದ  ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.