ಪ್ರತಿಕೂಲ ಸಾಕ್ಷ ್ಯಕ್ಕೆ ರಕ್ಷಣೆ ನೀಡದ ಸಿಬಿಐಗೆ ಹೈ ಕೋರ್ಟ್ ತರಾಟೆ

ಮುಂಬಯಿ : ಸೊಹ್ರಾಬುದ್ದಿನ್ ಮತ್ತು ತುಳಸಿರಾಂ ಪ್ರಜಾಪತಿ ಕೊಲೆ ಮೊಕದ್ದಮೆಯಲ್ಲಿ ಪ್ರಾಸಿಕ್ಯೂಷನ್ ಪರ ಸಾಕ್ಷಿ ನುಡಿದವರನ್ನು ರಕ್ಷಿಸಲು ಸಿಬಿಐ ವಿಫಲವಾಗಿದೆ ಎಂದು ಆರೋಪಿಸಿ ಮುಂಬಯಿಯ ಹೈಕೋರ್ಟ್ ನ್ಯಾಯಾಧೀಶರು ಸಿಬಿಐ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ ಯಾವುದೇ ಸಾಕ್ಷಿಯೂ ಸಹ ರಕ್ಷಣೆಗಾಗಿ ತಮ್ಮ ಬಳಿ ಬಂದಿಲ್ಲ ಎಂದು ಸಿಬಿಐ ಸಮಜಾಯಿಷಿ ನೀಡಿದೆ.

ಈ ಪ್ರಕರಣದಲ್ಲಿ ಸಿಬಿಐ ಎಷ್ಟು ಗಂಭೀರವಾಗಿ ತನಿಖೆಯನ್ನು ಮುಂದುವರೆಸಿದೆ ಎಂದು ಪ್ರಶ್ನಿಸಿರುವ ನ್ಯಾಯಮೂರ್ತಿ ರೇವತಿ ಮೋಹಿತ್ ದೇರೆ, ವಿಚಾರಣೆಯ ಸಂದರ್ಭದಲ್ಲಿ ಮೂವತ್ತಕ್ಕೂ ಹೆಚ್ಚು ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿರುವುದನ್ನು ಆಕ್ಷೇಪಿಸಿದ್ದಾರೆ. ಸಾಕ್ಷಿಗಳು ಭೀತಿಗೊಳಗಾಗುವುದರಿಂದ ತಪ್ಪಿಸುವುದು ಸಿಬಿಐ ಕರ್ತವ್ಯ ಎಂದು ಕೋರ್ಟ್ ಹೇಳಿದೆ.

“ಚಾರ್ಜಷೀಟ್ ಸಲ್ಲಿಸಿ ಸುಮ್ಮನೆ ಕೂರುವುದು ಸಿಬಿಐಗೆ ಶೋಭೆ ತರುವುದಿಲ್ಲ, ಸಾಕ್ಷಿಗಳನ್ನು ರಕ್ಷಿಸುವುದೂ ಆದ್ಯತೆಯಾಗಬೇಕು” ಎಂದು ನ್ಯಾಯಾಲಯ ಹೇಳಿದೆ. ಸೊಹ್ರಾಬುದ್ದಿನ್ ಮತ್ತು ಪ್ರಜಾಪತಿ ಪ್ರಕರಣದಲ್ಲಿ ಆರೋಪಿ ಪೊಲೀಸ್ ಅಧಿಕಾರಿಗಳನ್ನು ನಿರಪರಾಧಿಗಳೆಂದು ಘೋಷಿಸಿರುವುದರ ವಿರುದ್ಧ ಸೊಹ್ರಾಬುದ್ದಿನ್ ಸೋದರ ರುಬಾಬುದ್ದಿನ್ ಸಲ್ಲಿಸಿರುವ ಅರ್ಜಿಯನ್ನು ಮುಂಬಯಿ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

ಸೊಹ್ರಾಬುದ್ದಿನ್, ಆತನ ಪತ್ನಿ ಕೌಸರ್ ಬಿ ಮತ್ತು ಅಂಗರಕ್ಷಕ ತುಳಸಿರಾಂ ಪ್ರಜಾಪತಿ ಈ ಮೂವರನ್ನು 2005ರ ನವಂಬರಿನಲ್ಲಿ ಗುಜರಾತ್ ಮತ್ತು ರಾಜಸ್ಥಾನದ ವಿಶೇಷ ತನಿಖಾ ದಳಕ್ಕೆ ಸೇರಿದ ಪೊಲೀಸ್ ತಂಡ ಅಪಹರಿಸಿ ಹತ್ಯೆ ಮಾಡಿರುವುದಾಗಿ ಆರೋಪಿಸಲಾಗಿದೆ. ನಕಲಿ ಎನ್ಕೌಂಟರಿನಲ್ಲಿ ಮೂವರ ಹತ್ಯೆಯಾಗಿದೆ ಎಂಬ ಆರೋಪವನ್ನು ಕೋರ್ಟ್ ವಿಚಾರಣೆಗೊಳಪಡಿಸಿದೆ.

LEAVE A REPLY