ತಡೆಯಾಜ್ಞೆ ತೆರವು, ಯಥಾಸ್ಥಿತಿ ಕಾಪಾಡಲು ಹೈ ಆದೇಶ

ತಣ್ಣಗಾದ ಲೈಟ್ ಹೌಸ್ ಹಿಲ್ ರಸ್ತೆ ಮರುನಾಮಕರಣ ವಿವಾದ

ನಮ್ಮ ಪ್ರತಿನಿಧಿ ವರದಿ

 ಮಂಗಳೂರು : ನಗರದ ಲೈಟ್ ಹೌಸ್ ಹಿಲ್ ರಸ್ತೆಯ| ಮರುನಾಮಕರಣ ವಿರುದ್ಧದ ತಡೆಯಾಜ್ಞೆಯನ್ನು ತೆರವುಗೊಳಿಸಿರುವ ಮುಖ್ಯ ನ್ಯಾಯಮೂರ್ತಿ  ಸುಭ್ರೋ ಕಮಲ್ ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಅದೇ ಸಮಯ ಈ  ವಿಚಾರದಲ್ಲಿನ ಅಪೀಲಿನ ಮೇಲಿನ ತೀರ್ಪು ಹೊರಬರುವ ತನಕ ಮೇ 24ರಂದು ಇದ್ದಂತೆ ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವಂತೆ  ಎಲ್ಲಾ ಸಂಬಂಧಿತರಿಗೂ ಆದೇಶಿಸುವ ಮೂಲಕ ಸದ್ಯದ ಮಟ್ಟಿಗೆ ಈ ವಿವಾದವನ್ನು ತಣ್ಣಗಾಗಿಸಿದೆ.

ಲೈಟ್ ಹೌಸ್ ಹಿಲ್ ಮುಖಾಂತರ ಅಂಬೇಡ್ಕರ್ ವೃತ್ತದಿಂದ ಕ್ಯಾಥೋಲಿಕ್ ಕ್ಲಬ್  ತನಕದ ರಸ್ತೆಗೆ ವಿಜಯಾ ಬ್ಯಾಂಕಿನ ಮಾಜಿ ಅಧ್ಯಕ್ಷ ಮುಲ್ಕಿ ಸುಂದರರಾಮ್ ಶೆಟ್ಟಿ ಅವರ ಹೆಸರನ್ನಿಡಬೇಕೆಂದು ರಾಜ್ಯ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಆದೇಶ ಸಾಕಷ್ಟು ವಿವಾದ ಸೃಷ್ಟಿಸಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

ಈ ರಸ್ತೆಯನ್ನು ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂದು ಕರೆಯಲಾಗುತ್ತಿದೆಯೆಂದು ವಾದಿಸಿ ಹಾಗೂ ಮರನಾಮಕರಣವನ್ನು ವಿರೋಧಿಸಿ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳು ಭಾರೀ ಪ್ರತಿಭಟನೆಯನ್ನೂ  ನಡೆಸಿದ್ದವು.

ವಿಜಯಾ ಬ್ಯಾಂಕ್ ಉದ್ಯೋಗಿಗಳ ಸಂಘ ಹಾಗೂ  ಅದರ  ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ ಅವರು ಸಲ್ಲಿಸಿದ್ದ ಅಪೀಲಿನ ಮೇಲಿನ ವಿಚಾರಣೆಯ ನಂತರ ಈ ಯಥಾಸ್ಥಿತಿ ಆದೇಶ ಬಂದಿದೆ.

ಮಂಗಳೂರು ದಕ್ಷಿಣ ಶಾಸಕರಾದ ಜೆ ಆರ್ ಲೋಬೋ ಅವರು  ರಸ್ತೆ ನಾಮಕರಣ ಕುರಿತು ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟಿನ  ಮೊರೆ ಹೋಗಿದ್ದರು. ಈ ಸಂಬಂಧ ಇದೀಗ ತಡೆಯಾಜ್ಞೆ ವಿಧಿಸಿರುವ ಹೈಕೋರ್ಟ್ ಲೋಬೋ ಅವರಿಗೆ ನೋಟಿಸ್ ಜಾರಿಗೊಳಿಸಿದೆ ಎಂದು ಶೆಟ್ಟಿ ತಿಳಿಸಿದ್ದು, ಈ ಪ್ರಕರಣದ ಅಪೀಲುದಾರರಾದ  ವಿಜಯಾ ಬ್ಯಾಂಕ್ ಉದ್ಯೋಗಿಗಳ ಸಂಘ  ಮತ್ತು ತನಗೆ ಹಾಗೂ ಪ್ರತಿವಾದಿಗಳಾದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಮಂಗಳೂರು ನಗರ ಪಾಲಿಕೆ ಆಯುಕ್ತರು, ನಗರ ಯೋಜನಾಧಿಕಾರಿಗೆ ಈ ಬಗ್ಗೆ ಯಥಾಸ್ಥಿತಿ ಕಾಪಾಡುವಂತೆ ತಿಳಿಸಿದೆ.

ಹೈಕೋರ್ಟ್ ಆದೇಶ ತಮಗೆ ಸಂತಸ ನೀಡಿದೆ ಎಂದು ಹೇಳುವ ಶೆಟ್ಟಿ,  ಈ ರಸ್ತೆ ಮರುನಾಮಕರಣ ಕುರಿತಂತ ಮೂಲತಃ ಮಂಗಳೂರು ಮಹಾನಗರಪಾಲಿಕೆ ಕೈಗೊಂಡ ನಿರ್ಣಯವನ್ನು  ಕನಿಷ್ಠ ಈಗ ರಾಜ್ಯ ಸರಕಾರಕ್ಕೆ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

“ಒಂದು ವೇಳೆ ಪ್ರತಿವಾದಿಗಳು ನಿಗದಿತ ಅವಧಿಯೊಳಗೆ ತಮ್ಮ ಉತ್ತರಗಳನ್ನು ನೀಡಲು ವಿಫಲರಾದರೆ ಪ್ರಕರಣದ ತೀರ್ಪು ನಮ್ಮ ಪರವಾಗಿ ಬರಲಿದೆ” ಎಂಬ ಆತ್ಮವಿಶ್ವಾಸವನ್ನು ಶೆಟ್ಟಿ ವ್ಯಕ್ತಪಡಿಸುತ್ತಾರೆ.