ಪಂಚಾಯತಿ ಬಸ್ ನಿಲ್ದಾಣ ಕಟ್ಟಡ ಸಮುಚ್ಛಯ ಕೆಡಹಲು ಹೈ ಆದೇಶ

ಮಂಜೇಶ್ವರ : ಕುಸಿಯಲು ಸಿದ್ಧವಾಗಿರುವ ಕುಂಬಳೆ ಬಸ್ ನಿಲ್ದಾಣ ಕಟ್ಟಡ ಸಮುಚ್ಛಯವನ್ನು ಕೆಡಹುವಂತೆ ಕೇರಳ ಹೈಕೋರ್ಟು ಆದೇಶಿಸಿದೆ.

ಕೋರ್ಟು ನೀಡಿರುವ ನಿರ್ದೇಶನದಂತೆ ಬಸ್ ನಿಲ್ದಾಣ ಕಟ್ಟಡ ಕೆಡಹುವ ಕ್ರಮವನ್ನು ಶೀಘ್ರವೇ ಕೈಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಪಂ ಆಡಳಿತ ಸಮಿತಿ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡ ಶಿಥಿಲವಾಗಿರುವ ಬಗ್ಗೆ ಪಂಚಾಯತಿಯ ಅಭಿಯಂತರರು 4 ವರ್ಷಗಳ ಹಿಂದೆಯೇ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಾಲಯ ಕಟ್ಟಡ ಕೆಡಹುವಂತೆ  ಆದೇಶ ನೀಡಿದೆ.

ಸುಮಾರು 45 ವರ್ಷಗಳಿಗೂ ಹಿಂದೆ ನಿರ್ಮಿಸಲಾದ ಕುಂಬಳೆ ಬಸ್ ನಿಲ್ದಾಣ ಸಮುಚ್ಛಯ ಶಿಥಿಲಗೊಂಡು ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಕಟ್ಟಡದ ಹಲವು ಭಾಗಗಳ ಮೇಲ್ಛಾವಣಿಯ ಸ್ಲಾಬ್ ಈಗಾಗಲೇ ಕೆಲವು ಬಾರಿ ಕುಸಿದು ಬಿದ್ದಿದ್ದು, ಬಸ್ಸಿಗಾಗಿ  ಕಾಯುತ್ತಿದ್ದ  ಪ್ರಯಾಣಿಕರು ಗಾಯಗೊಂಡಿದ್ದರು. ಕಟ್ಟಡಕ್ಕೆ ಕಳೆದ ನಾಲ್ಕು ವರ್ಷಗಳಿಂದ ಲೋಕೋಪಯೋಗಿ ಇಲಾಖೆ ಫಿಟ್ನೆಸ್ ಪ್ರಮಾಣಪತ್ರವನ್ನೂ ನೀಡಿರಲಿಲ್ಲ. ಕಟ್ಟಡದಲ್ಲಿ ವ್ಯಾಪಾರ ನಡೆಸುತ್ತಿರುವವರು ಜಾಗ ತೆರವುಗೊಳಿಸುವಂತೆ ಪಂಚಾಯತಿ ಹಲವು ಬಾರಿ ನೋಟೀಸ್ ಜಾರಿಗೊಳಿಸಿತ್ತು. ಆದರೆ ಪರ್ಯಾಯ ಸೌಕರ್ಯವಿಲ್ಲದೆ ಕಟ್ಟಡ ತೆರವುಗೊಳಿಸುವುದಿಲ್ಲವೆಂದು ವ್ಯಾಪಾರಿಗಳು ಪ್ರತಿಭಟಿಸಿದ್ದರು. ಹೀಗೆ ಪಂಚಾಯತ್ ಮತ್ತು ವ್ಯಾಪಾರಿಗಳ ನಡುವಿನ ವಿವಾದ ಹೈ ಕೋರ್ಟ್ ಮೆಟ್ಟಿಲೇರಿತ್ತು.