ದಿವಾಕರ ಶಾಸ್ತ್ರಿ ವಿರುದ್ಧ ಪುತ್ತೂರು ನ್ಯಾಯಾಲಯದ ಸಮನ್ಸ್ ರದ್ದು

ಬೆಂಗಳೂರು : ಪುತ್ತೂರು ತಾಲೂಕಿನ ಕೆದಿಲ ಗ್ರಾಮದ ತಮ್ಮ ಮನೆಯಲ್ಲಿ 2014ರ ಆಗಸ್ಟ್ 31ರಂದು  ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿಯಲಾದ  ಶ್ಯಾಮ ಶಾಸ್ತ್ರಿ ಸಾವು ಪ್ರಕರಣದಲ್ಲಿ  ಅವರ ಸಹೋದರ  ದಿವಾಕರ ಶಾಸ್ತ್ರಿ ಮತ್ತಿತರರ ಕೈವಾಡವಿದೆಯೆಂದು ಆರೋಪಿಸಿ ಗೋವಿಂದ ಶಾಸ್ತ್ರಿ ಎಂಬವರು  ಸಲ್ಲಿಸಿದ ಅಪೀಲಿನ ಮೇಲೆ ವಿಚಾರಣೆ ನಡೆಸಿ ಪುತ್ತೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ದಿವಾಕರ ಶಾಸ್ತ್ರಿಗೆ ಈ ಹಿಂದೆ ಸಮನ್ಸ್ ಜಾರಿಗೊಳಿಸಿದ್ದರೆ ಇದೀಗ ಹೈಕೋರ್ಟ್ ಈ  ಸಮನ್ಸ್ ರದ್ದುಗೊಳಿಸಿ ಆದೇಶ ನೀಡಿದೆ.

ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಮಠದ ಮಾಜಿ ರಾಮಕಥಾ ಗಾಯಕಿ ಪ್ರೇಮಲತಾ ಶಾಸ್ತ್ರಿಯ ಪತಿಯಾಗಿರುವ ದಿವಾಕರ ಶಾಸ್ತ್ರಿ  ಪುತ್ತೂರು ನ್ಯಾಯಾಲಯದ ಸವiನ್ಸ್ ಪ್ರಶ್ನಿಸಿ ಹೈಕೋರ್ಟಿನ ಮೊರೆ ಹೋಗಿದ್ದರಲ್ಲದೆ ಶ್ಯಾಮ ಶಾಸ್ತ್ರಿ ಪ್ರಕರಣದ ಸಿಐಡಿ ತನಿಖೆ ನಡೆಯುತ್ತಿರುವ ಹೊರತಾಗಿಯೂ ತಮ್ಮ ವಿರುದ್ಧ ಹಗೆ ಸಾಧನೆಗಾಗಿ ಗೋವಿಂದ ಶಾಸ್ತ್ರಿ ಪುತ್ತೂರು ನ್ಯಾಯಾಲದಿಂದ ಸಮನ್ಸ್ ಜಾರಿಗೊಳಿಸಿಸುವಂತೆ ಮಾಡಿರುವುದರಿಂದ ಅದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದರು.

“ಶ್ಯಾಮ ಶಾಸ್ತ್ರಿ ಆತ್ಮಹತ್ಯೆ  ಮಾಡಿಕೊಂಡಿಲ್ಲ, ಬದಲಾಗಿ ಅದೊಂದು ಕೊಲೆ, ಪ್ರಕರಣದ ಸಮಗ್ರ ತನಿಖೆ ನಡೆಸಬೇಕು” ಎಂದು ಗೋವಿಂದ ಶಾಸ್ತ್ರಿ  ಪುತ್ತೂರು ನ್ಯಾಯಾಲಯದಲ್ಲಿ ದಾಖಲಿಸಿದ್ದ ಖಾಸಗಿ ದೂರಿನಲ್ಲಿ ತಿಳಿಸಿದ್ದರು.