ಎಪಿಪಿಗೆ ನಿಧಿ ನೀಡಿದವರ ಹೆಸರು ಬಹಿರಂಗಕ್ಕೆ ಅಣ್ಣಾ ಹಜಾರೆ ಆಗ್ರಹ

ನವದೆಹಲಿ : ಪಕ್ಷಕ್ಕೆ ಕೊಡುಗೆ ನೀಡಿದವರ ಹೆಸರು ಸಾರ್ವಜನಿಕಗೊಳಿಸುವುದಾಗಿ ಭರವಸೆ ನೀಡಿದ್ದರೂ, ಇದುವರೆಗೂ ಆ ಕೆಲಸ ಮಾಡದಿರುವ ದಿಲ್ಲಿ ಸೀಎಂ ಅರವಿಂದ ಕೇಜ್ರಿವಾಲಗೆ ಭ್ರಷ್ಟಾಚಾರ ವಿರುದ್ಧ ಚಳುವಳಿ ಸಾರಿರುವ ಅಣ್ಣಾ ಹಜಾರೆ ಇತ್ತೀಚೆಗೆ ಬರೆದಿರುವ ಪತ್ರವೊಂದರಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ಸಮಯದಲ್ಲಿ ಎಪಿಪಿ ಅಧ್ಯಕ್ಷ ಕೇಜ್ರಿವಾಲ ನಿಧಿ ಮೂಲಗಳ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸನ್ನು ಪ್ರಶ್ನಿಸುತ್ತಿದ್ದರು.

“ದೇಶ ಮತ್ತು ಸಮಾಜದ ಒಳಿತಿಗಾಗಿ ಮಹಾರಾಷ್ಟ್ರದಲ್ಲಿ ನಡೆಸಬೇಕಿದ್ದ ಕೆಲವು ಮಹತ್ವದ ಕೆಲಸಗಳನ್ನು ಬಿಟ್ಟು ಯಾವುದೇ ವೈಯಕ್ತಿಕ ಹಿತಾಸಕ್ತಿಯಿಲ್ಲದೆ ನನ್ನ ಸಮಯ ವ್ಯಯಿಸಿದ್ದೇನೆ. ದೇಶದ ಜನರು ಸಮಾಧಾನದಿಂದ ಬದುಕುವುದು ನನ್ನ ಕನಸಾಗಿದೆ. ಆದರೆ ಈಗ ಆ ನನ್ನ ಕನಸು ನುಚ್ಚುನೂರಾಗಿದೆ” ಎಂದು ಹಜಾರೆ ತನ್ನ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಎಪಿಪಿ ಸದಸ್ಯತ್ವದಿಂದ ವಜಾಗೊಂಡಿರುವ ಅಮೆರರಿಕ ಮೂಲದ ಮೆಡಿಕೋ ಮುನಿಶ್ ರೈಜಾದ್ ತನಗೆ ಬರೆದಿರುವ ಪತ್ರವೊಂದನ್ನು ಉದ್ಧರಿಸಿರುವ ಭ್ರಷ್ಟಾಚಾರ ವಿರೋಧಿ ನಾಯಕ ಹಜಾರೆ, ಎಪಿಪಿಗೆ ಹಣಕಾಸು ಒದಗಿಸದವರ ಪಟ್ಟಿ ಪಕ್ಷದ ಅಧಿಕೃತ ವೆಬ್ ಸೈಟಿನಿಂದ 2016 ಜೂನಿನಿಂದ ಹಾರಿ ಹೋಗಿದೆ. ಇದನ್ನು ಮುಂದಿಟ್ಟುಕೊಂಡು ಅವರು (ಮುನಿಶ್) ಶನಿವಾರ ರಾಜ್ ಘಾಟಿನಿಂದ `ಚಂದಾ ನೀಡಬೇಡಿ’ ಸತ್ಯಾಗ್ರಹ ಆರಂಭಿಸಿದ್ದಾರೆಂದು ಎಂದು ಹಜಾರೆ ತಿಳಿಸಿದ್ದಾರೆ.