`ಈಗಿಂದೀಗಲೇ ಬಾಲಿವುಡ್ಡಿಗೆ ಗುಡ್ ಬೈ ಹೇಳಿದರೂ ನನಗೇನೂ ನಷ್ಟವಿಲ್ಲ’

ರೆಬೆಲ್ ನಟಿ ಕಂಗನಾಳ ದಿಟ್ಟ ನುಡಿ

ಮುಂಬೈ : ಈ ಬಾಲಿವುಡ್ ಬೆಡಗಿಯ ಸುಮಾರು ಒಂದು ದಶಕದ ಪಯಣವು ಹಲವು ಏಳು ಬೀಳುಗಳ ಹೊರತಾಗಿಯೂ ಆಕೆಗೆ ಮೂರು ರಾಷ್ಟ್ರ ಪ್ರಶಸ್ತಿ ಜತೆಗೆ ಹಲವಾರು ಮಾನ್ಯತೆಗಳನ್ನೂ ನೀಡಿದೆ. “ಈ ಕ್ಷಣದಲ್ಲಿ ನನ್ನ ಬಾಲಿವುಡ್ ಪಯಣ ಅಂತ್ಯವಾದರೂ ಚಿಂತೆಯಿಲ್ಲ. ನನಗೇನೂ ನಷ್ಟವಿಲ್ಲ. ಮುಂದಿನ ಜೀವನದುದ್ದಕ್ಕೂ ಆನಂದಿಸಲು ದೊಡ್ಡ ಯಶೋಗಾಥೆಯೇ ಇದೆ” ಎಂದು ಆತ್ಮವಿಶ್ವಾಸದಿಂದ ಬೀಗುತ್ತಾರೆ ಕಂಗನಾ ರನೌತ್.

ಹತ್ತು ವರ್ಷಗಳ ಹಿಂದೆ, 2006ರಲ್ಲಿ `ಗ್ಯಾಂಗಸ್ಟರ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಕಂಗನಾ “ಆರಂಭದ ದಿನಗಳಲ್ಲಿದ್ದ ನನ್ನ ಭಯವನ್ನು ಹಿಮ್ಮೆಟ್ಟಿಸಿದ್ದೇನೆ. ನನ್ನ ಚಿತ್ರ ಜೀವನ ನನಗೆ ಬಹಳಷ್ಟು ಸಂತೋಷ ನೀಡಿದೆ. ನಾನ್ಯಾರು, ನನ್ನ ಸಾಧನೆ, ಸಾಮಥ್ರ್ಯಗಳೇನು ಎಂದು ನಾನು ಗುರುತಿಸಿಕೊಂಡಿದ್ದೇನೆ. ನನ್ನ ಸಾಧನೆಯ ಬಗ್ಗೆ  ಹೆಮ್ಮೆಯಿದೆ. ನಾನು ಮೂರು ಬಾರಿಯ ರಾಷ್ಟ್ರಪ್ರಶಸ್ತಿ ವಿಜೇತೆ. ಬಾಕ್ಸಾಫೀಸ್ ದಾಖಲೆಗಳನ್ನು ನುಚ್ಚುನೂರು ಮಾಡಿದ್ದೇನೆ. ಈಗಿಂದೀಗಲೇ ನನ್ನ ಚಿತ್ರರಂಗದ ಪಯಣ ಮುಗಿದರೂ ನನಗೆ ಕಳೆದುಕೊಳ್ಳಲು ಏನೂ ಇಲ್ಲ” ಎಂದು ಹೇಳುತ್ತಾರೆ ಈ 31 ವರ್ಷದ ಚೆಲುವೆ.

“ನಾನೇಕೆ ಈಗ ಭಯಪಡಬೇಕು ? ನಾನು ಮನೆ ಬಿಟ್ಟಾಗ ಸ್ವತಂತ್ರವಾಗಿರಬೇಕೆಂದು ಬಯಸಿದ್ದೆ. ಈಗ ನಾನೊಬ್ಬಳು ಮೆಗಾ ಸ್ಟಾರ್, ನಾನೊಂದು ಜನಪ್ರಿಯ ಹೆಸರು. ಈಗ ನಾನು ಭಯಪಟ್ಟರೆ ಜೀವನಪೂರ್ತಿ ಭಯಪಡಬೇಕಾದೀತು. ನನ್ನ ಸಾಮಥ್ರ್ಯದ ಮೇಲೆ ನನಗೆ ನಂಬಿಕೆಯಿದೆ, ನನ್ನ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳುತ್ತಾರೆ ಈ ದಿಟ್ಟ ನಟಿ.

ಚಿತ್ರರಂಗದಿಂದ ನಿವೃತ್ತಿ ಹೊಂದಿದ ಪಕ್ಷದಲ್ಲಿ ನೀವೇನು ಮಾಡುತ್ತೀರಿ ಎಂಬ ಪ್ರಶ್ನೆಗೆ ಥಟ್ಟೆಂದು ಆಕೆಯಿಂದ ಉತ್ತರ ಬರುತ್ತದೆ. “ಮನಾಲಿಯಲ್ಲೊಂದು ಸುಂದರ ಮನೆ ನಿರ್ಮಿಸಿದ್ದೇನೆ. ಅಲ್ಲಿ ಸಮಯ ಕಳೆಯಲಿಚ್ಛಿಸುತ್ತೇನೆ, ಪುಸ್ತಕಗಳನ್ನು ಬರೆಯುತ್ತೇನೆ. ಆಗೊಮ್ಮೆ ಈಗೊಮ್ಮೆ ಚಿತ್ರ ನಿರ್ದೇಶಿಸುತ್ತೇನೆ” ಎನ್ನುತ್ತಾರೆ ಆಕೆ.

ನಟ ಹೃತಿಕ್ ರೋಶನ್ ಅವರನ್ನು ತನ್ನ `ಸಿಲ್ಲಿ ಎಕ್ಸ್’ ಎಂದು ಹೇಳುವ ಮೂಲ ವಿವಾದದಲ್ಲಿ ಸಿಲುಕಿದ್ದ ನಟಿಗೆ ಎರಡು ಕಾನೂನು ನೋಟಿಸುಗಳೂ ಜಾರಿಯಾಗಿದ್ದವು. ಆ ವಿಚಾರ ಎತ್ತಿದರೆ ಸಾಕು, “ನಾನು ಹೇಳುವುದೆಲ್ಲವನ್ನೂ ಹೇಳಿದ್ದೇನೆ. ಈ ವಿಷಯ 2014ರಲ್ಲಿಯೇ ಮುಗಿದುಹೋಗಿದೆ. ಅದರ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ” ಎಂದು ಬಿಡುತ್ತಾರೆ.

ಇತ್ತೀಚೆಗೆ `ಆಪ್ ಕಿ ಅದಾಲತ್’ ಟೀವಿ ಕಾರ್ಯಕ್ರಮದಲ್ಲಿ ಹೃತಿಕ್ ಜತೆಗಿನ ತನ್ನ ಸಂಬಂಧದ ಬಗ್ಗೆ ಮುಕ್ತ ಮನಸ್ಸಿನಿಂದ ಕಂಗನಾ ಮಾತನಾಡಿದ ನಂತರ ಹೃತಿಕ್ ಮಾಜಿ ಪತ್ನಿ ಸುಸೇನ್ ಖಾನ್ ಆತನ ಬೆಂಬಲಕ್ಕೆ ನಿಂತಿದ್ದರು. ಇದರ ಬಗ್ಗೆ ಪ್ರತಿಕ್ರಿಯಿಸಲು ಕಂಗನಾ ನಿರಾಕರಿಸುತ್ತಾರೆ.

ತನ್ನನ್ನು ಟೀಕಿಸುವವರ ಬಗ್ಗೆ ಏನನ್ನೂ ಹೇಳಲು ಬಯಸದ ಕಂಗನಾ, ತನ್ನನ್ನು ಬೆಂಬಲಿಸುವವರಿಗೆ ತನ್ನಲ್ಲಿ ಆತ್ಮಸ್ಥೈರ್ಯ ತುಂಬಿಸುವವರಿಗೆ ಸದಾ ಋಣಿ ಎನ್ನುತ್ತಾರೆ.

“ನನಗೆ ಸಮಯ ಸಿಕ್ಕಾಗಲೆಲ್ಲಾ ಮಾಧ್ಯಮದ ಜತೆ ಮಾತನಾಡುತ್ತೇನೆ, ನನ್ನ ಮೇಲೆ ಪ್ರೀತಿ ತೋರಿಸಿ ಉದ್ದುದ್ದ ಪತ್ರ ಬರೆಯುವವರ ಬಗ್ಗೆ ಮಾನಾಡುತ್ತೇನೆ. ಆದರೆ ತನ್ನ ಮೇಲೆ ಸಲ್ಲದ ಆರೋಪ ಹೊರಿಸುವವರ ಬಗ್ಗೆ ಮಾತ್ರ ತಾನು ಮಾತನಾಡೆನು” ಎನ್ನುತ್ತಾರೆ ಕಂಗನಾ. ಕಂಗನಾರ ಲೇಟೆಸ್ಟ್ ಚಿತ್ರ ಹಂಸಲ್ ಮೆಹ್ತಾ ನಿರ್ದೇಶನದ `ಸಿಮ್ರನ್’ ಈ ವರ್ಷದ ಸೆಪ್ಟೆಂಬರ್ 15ರಂದು ಬಿಡುಗಡೆಯಾಗಲಿದೆ.