ಗೌರವಯುತ ಜೀವನ ನಿಮ್ಮದಾಗಬೇಕೇ ?

ಸಾಂದರ್ಭಿಕ ಚಿತ್ರ

ಬದುಕು ಬಂಗಾರ-192

ಗೌರವಯುತ ಜೀವನ ನಡೆಸಬೇಕೆಂಬುದು ಎಲ್ಲರ ಇಚ್ಛೆ. ಇಂತಹ ಜೀವನ ನಮ್ಮದಾಗಬೇಕಾದರೆ ನಾವು ಇತರರನ್ನು ಗೌರವಿಸಬೇಕು ಹಾಗೂ ಇತರರು ನಮ್ಮನ್ನು ಗೌರವದಿಂದ ಕಾಣುವಂತಾಗಬೇಕು. ಸಮಾಜದಲ್ಲಿ ಗೌರವ ಪಡೆಯಬೇಕೆಂಬ ಬಯಕೆ ಎಲ್ಲರಿಗೂ ಇರುತ್ತದೆ. ಆದರೆ ಅದಕ್ಕಾಗಿ ಕೆಲವೊಂದು ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಬೇಕು.

ಎಲ್ಲರನ್ನೂ ಗೌರವಿಸಿ : ಇದು ಎಲ್ಲರಿಂದಲೂ ಗೌರವ ಪಡೆದುಕೊಳ್ಳಲು ಇರುವ ಸುಲಭ ಉಪಾಯ. ಇತರರನ್ನು ಬದಲಾಯಿಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ ಅವರೊಡನೆ ನಾವು ತೋರುವ ವರ್ತನೆಯಲ್ಲಿ ಬದಲಾವಣೆ ತರಬಹುದು. ಅವರು ನಿಮಗೆ ಗೌರವ ತೋರದೇ ಇದ್ದರೂ ಚಿಂತೆಯಿಲ್ಲ, ನೀವು ಅವರನ್ನು ಗೌರವದಿಂದ ಕಾಣಿ. ಕ್ರಮೇಣ ಅವರು ಕೂಡ ನಿಮಗೆ ಗೌರವ ನೀಡುತ್ತಾರೆ.

ಮಾತುಗಳನ್ನು ಉಳಿಸಿ : ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳುವವರಾಗಬೇಕು. ನಿಮ್ಮ ಪ್ರೀತಿಪಾತ್ರರೊಬ್ಬರಿಗೆ ಒಂದು ಭರವಸೆ ನೀಡಿದ್ದೀರೆನ್ನಿ. ಅದನ್ನು ನೀವು ಅಷ್ಟೇ ಸುಲಭವಾಗಿ ಮರೆತುಬಿಟ್ಟರೆ ನೀವು ಅವರ ವಿಶ್ವಾಸವನ್ನೂ ಗೌರವವನ್ನೂ ಕಳೆದುಕೊಳ್ಳುತ್ತೀರಿ. ಬದಲಾಗಿ ನೀಡಿದ ಭರವಸೆಯನ್ನು ಕ್ಷಿಪ್ರವಾಗಿ ಈಡೇರಿಸಿದಿರೆನ್ನಿ, ಇತರರಿಗೆ ನಿಮ್ಮ ಮೇಲಿನ ಗೌರವ ಇನ್ನೂ ಅಧಿಕವಾಗುತ್ತದೆ.

ಮಾತಿಗಿಂತ ಕೃತಿಗೆ ಆದ್ಯತೆ ನೀಡಿ : ಬರೀ ಬಾಯ್ಮಾತು ಸಾಲದು. ಹೇಳಿದಂತೆ ನಡೆದುಕೊಳ್ಳಿ, ಕೆಲವೊಮ್ಮ ಯಾರೊಡನೆಯೂ ಹೇಳಿಕೊಳ್ಳದೆಯೇ ಕಾರ್ಯಸಾಧಿಸಿ ಬಿಡಿ. ಸಮಾಜ ಅಚ್ಚರಿಯಿಂದ ನಿಮ್ಮ ಸಾಧನೆಯನ್ನು ಗಮನಿಸುತ್ತದೆ, ನಿಮಗೆ ಹ್ಯಾಟ್ಸಾಫ್ ಹೇಳುತ್ತದೆ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಹೇಳಿ ?

ಸಹಾಯ ಹಸ್ತ ಚಾಚಿ : ಇತರರಿಗೆ ಸಹಾಯ ಮಾಡುವ ಗುಣವನ್ನು ನಾವು ಯಾವತ್ತೂ ಮೈಗೂಡಿಸಿಕೊಂಡಿರಬೇಕು. ನವiಗೇನೇ ಕಷ್ಟವಿದ್ದರೂ ಚಿಂತೆಯಿಲ್ಲ, ಇತರರು ಕಷ್ಟ ಪಡುವುದನ್ನು ನೋಡಿದಾಗ ಕೈಕಟ್ಟಿ ಕೂರದೆ ಅವರ ಕಷ್ಟಗಳಿಗೆ ಸ್ಪಂದಿಸಿ, ನಿಮ್ಮಿಂದಾದಷ್ಟು ಸಹಾಯ ಮಾಡಿ. ಎಲ್ಲರ ಗೌರವಕ್ಕೆ ಪಾತ್ರರಾಗುವಿರಿ.

ಸಹಾಯ ಕೋರಲು ಸಂಕೋಚ ಬೇಡ : ಇತರರಿಗೆ ನೀವು ಸಹಾಯ ಮಾಡಿದಂತೆಯೇ, ಜೀವನದಲ್ಲಿ ಯಾವತ್ತಾದರೂ ನಿಮಗೆಯಾರಿಂದಲಾದರೂ ಸಹಾಯ ಬೇಕಿದೆಯೆಂದಾದಲ್ಲಿ ಸಹಾಯ ಕೋರಲು ಹಿಂಜರಿಕೆ ಬೇಡವೇ ಬೇಡ.

ಜವಾಬ್ದಾರಿ ಮುಖ್ಯ : ನಿಮ್ಮ ಜೀವನದ ಎಲ್ಲಾ ಆಗುಹೋಗುಗಳಿಗೂ ನೀವೇ ಜವಾಬ್ದಾರರು. ನೀವು ತಪ್ಪು ಮಾಡಿದ್ದೀರೆಂದಾದಲ್ಲಿ ಅದನ್ನು ಒಪ್ಪಿಕೊಂಡು ಬಿಡಿ. ಇದರಿಂದ ನಿಮಗೇನೂ ನಷ್ಟವಾಗದು, ಬದಲಾಗಿ ನಿಮ್ಮ ಮೇಲೆ ಇತರರಿಗೆ ಇನ್ನೂ ಹೆಚ್ಚಿನ ಅಭಿಮಾನ ಮೂಡುವುದು.

 

 

LEAVE A REPLY