ಸಂತಸದ ಕ್ಷಣ ನಿಮ್ಮದಾಗಲಿ

ಬದುಕು ಬಂಗಾರ-217

ಮನುಷ್ಯರು ಸಂತೋಷ, ನೆಮ್ಮದಿಯಿಂದ ಜೀವನ ನಡೆಸಬೇಕೆನ್ನುವುದು ಸೃಷ್ಟಿಕರ್ತನ ಇಚ್ಛೆ. ದುಃಖ, ಕಷ್ಟ ಕಾರ್ಪಣ್ಯಗಳು ಜೀವನದಲ್ಲಿ ಸಹಜವಾಗಿರುವಾಗ ಸದಾ ಅವುಗಳ ಬಗ್ಗೆಯೇ ಚಿಂತಿಸುತ್ತಾ ಈ ಕ್ಷಣದ ಆನಂದವನ್ನು ನಾವು ಮರೆತುಬಿಡುತ್ತೇವೆ. ಈ ಕ್ಷಣಿಕ ಜೀವನದಲ್ಲಿ ಇರುವಷ್ಟು ದಿನ ಸಂತೋಷದಿಂದ, ನಗುನಗುತ್ತಾ, ಇತರರಿಗೆ ಸಹಾಯ ಮಾಡುವವರೇ ನಿಜವಾಗಿಯೂ ಪುಣ್ಯಜೀವಿಗಳು. ಕಷ್ಟ ಹಾಗೂ ದುಃಖದ ಸಂದರ್ಭಗಳಲ್ಲಿಯೂ ನಾವು ಶಾಂತಿ, ಸಮಾಧಾನದಿಂದಿರಬೇಕು ಎನ್ನುತ್ತಾರೆ ತಿಳಿದವರು.

ನಿಮ್ಮ ಸುತ್ತಮುತ್ತ ಸಂತಸವನ್ನೇ ತುಂಬಿ, ಮುಗುಳ್ನಗುತ್ತಾ ಎಲ್ಲರೊಡನೆ ವ್ಯವಹರಿಸಿ, ಅವರಲ್ಲೂ ಸಂತೋಷ ಮೂಡುವಂತೆ ಮಾಡಿ. ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದೂ ಅತಿ ಮುಖ್ಯ.

ಜೀವನದ ಪ್ರತಿ ಕ್ಷಣವನ್ನು ಆಸ್ವಾದಿಸಿ, ಭವಿಷ್ಯದ ನೋವುಗಳ ಬಗ್ಗೆ ಚಿಂತಿಸುತ್ತಾ ಕೂರಬೇಡಿ. ಹಾಗೆ ಮಾಡಿದಲ್ಲಿ ನೀವು ಸಂತಸದಲ್ಲಿರುವುದು ಸಾಧ್ಯವೇ ಆಗದು. ಆದರೆ ನಮ್ಮ ಸಂತಸ ಇತರರ ದುಃಖಕ್ಕೆ ಕಾರಣವಾಗದಂತೆ ನೋಡಿಕೊಳ್ಳುವುದು ನಮ್ಮ ಧರ್ಮ. ಶಿಸ್ತು ಕೂಡ ಅತೀ ಮುಖ್ಯ, ಅಶಿಸ್ತು ಹಾಗೂ ಆಲಸ್ಯ ಜೀವನಕ್ಕೆ ಹಾನಿಕರವೆಂಬುದನ್ನು ಮರೆಯಬೇಡಿ.

ಜೀವನವನ್ನು ಸಂಪೂರ್ಣವಾಗಿ ಆನಂದಿಸಬೇಕು, ಪ್ರತಿ ಅನುಭವ ಒಂದು ಹೊಸ ಪಾಠವಾಗಬೇಕು. ಕಷ್ವಗಳನ್ನು ಸವಾಲೆಂಬಂತೆ ಸ್ವೀಕರಿಸಿ. ಇವು ನಿಮ್ಮ ಪರೀಕ್ಷೆಯ ಕಾಲ, ಇವುಗಳನ್ನು ನೀವು ದಾಟಿ ಬಂದಾಗ ಇನ್ನಷ್ಟು ಮಾನಸಿಕವಾಗಿ ಸುದೃಢರಾಗುವಿರಿ.

ಜೀವನದಲ್ಲಿ ಏನೇ ಕಷ್ಟ ಬಂದರೂ ಎದುರಿಸುವೆ ಎಂಬ ಛಲ ನಿಮ್ಮಲ್ಲಿರಲಿ.  ಜೀವನ ಒಂದು ಸಾಹಸ. ಅಲ್ಲಿ ಕಷ್ಟಗಳನ್ನು ನಿರೀಕ್ಷಿಸಿ, ಚಾರಣಿಗರು ಅಥವಾ ಪರ್ವತಾರೋಹಿಗಳಂತೆ ಪ್ರತಿ ಕ್ಷಣ ಹೊಸ ಸವಾಲುಗಳು ನಿಮಗೆದುರಾಗಬಹುದು.

ದೇವರ ಉಡುಗೊರೆಯಾದ ಈ ಜೀವನದಲ್ಲಿ ಸೌಂದರ್ಯವನ್ನು ಕಾಣಿ. ಋಣಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಈ ಅಮೂಲ್ಯ ಜೀವನದ ಅಮೂಲ್ಯ ಕ್ಷಣಗಳನ್ನು ಹಾಳುಗೆಡವಬೇಡಿ. ಜೀವನ ಒಂದು ಸುಂದರ ಪಯಣ. ಈ ಪಯಣದಲ್ಲಿ ಸಂತೋಷದಿಂದ ಮುಂದೆ ಸಾಗಿ. ನೀವೂ ನಕ್ಕು ಇತರರನ್ನೂ ನಗಿಸಿ.

 

LEAVE A REPLY