‘ಅಕ್ಷಯ್ ವೃತ್ತಿಪರತೆಗೆ ಹ್ಯಾಟ್ಸಾಫ್’ : ಭೂಮಿ

`ಧಮ್ ಲಗಾ ಕೆ ಐಸಾ’ ಚಿತ್ರದಲ್ಲಿಯ ಭೂಮಿ ತೂಕದ ಹುಡುಗಿ ಭೂಮಿ ಪಡ್ನೇಕರ್ ಇಂದು ರಿಲೀಸ್ ಆಗುತ್ತಿರುವ `ಟಾಯ್ಲೆಟ್-ಏಕ್ ಪ್ರೇಮ್ ಕಥಾ’ ಚಿತ್ರದಲ್ಲಿ ಬಾಲಿವುಡ್ಡಿನ ಸೂಪರ್ ಸ್ಟಾರ್, ರಾಷ್ಟ್ರೀಯ ಪ್ರಶಸ್ತಿ ಪರಸ್ಕøತ ಅಕ್ಷಯ್ ಕುಮಾರ್ ಜೊತೆ ನಟಿಸಿದ್ದಾಳೆ. ಈಗ ಗುರುತೇ ಸಿಗದಷ್ಟು ಸ್ಲಿಮ್ ಆಂಡ್ ಟ್ರಿಮ್ ಆಗಿರುವ ಭೂಮಿ ತನ್ನ ಸಹನಟ ಅಕ್ಷಯ್ ಬಗ್ಗೆ ಭಾರೀ ಮೆಚ್ಚುಗೆಯಿಂದ ಮಾತಾಡುತ್ತಾಳೆ.

“ಅಕ್ಷಯ್ ಒಬ್ಬರು ಭಾರೀ ಬ್ರಿಲಿಯಂಟ್ ಆಕ್ಟರ್. ಅವರು ಸಮಯಕ್ಕೆ ಭಾರೀ ಮಹತ್ವ ಕೊಡುತ್ತಾರೆ. ಅವರ ವೃತ್ತಿಪರತೆ ಅದ್ಭುತ. ಹೊಸಬರ ಜೊತೆ ನಟಿಸುವಾಗಲೂ ಅವರು ತಮ್ಮ ಸ್ಟಾರ್ ಗಿರಿಯನ್ನು ಯಾರ ಮೇಲೂ ಹೇರುವುದಿಲ್ಲ. ಎಲ್ಲರ ಜೊತೆಯೂ ಸ್ನೇಹದಿಂದಿರುತ್ತಾರೆ. ಸಿನಿಮಾ ಚೆನ್ನಾಗಿ ಮೂಡಿಬರಬೇಕು ಎನ್ನುವುದಷ್ಟೇ ಅವರ ಕಾಳಜಿ. ಅವರಿಂದ ಬಹಳಷ್ಟು ಕಲಿತಿದ್ದೇನೆ” ಎಂದು ಅಕ್ಷಯ್ ಬಗ್ಗೆ ಬಹಳವಾಗಿ ಹೊಗಳುತ್ತಾಳೆ ಭೂಮಿ.

ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಮಾತಾಡುವಲ್ಲಿ ಅಕ್ಷಯ್ ಯಾವಾಗಲೂ ಮುಂದಿರುತ್ತಾರೆ. ರೈತರಿಂದ ಹಿಡಿದು ಸೈನಿಕರವರೆಗೆ ಎಲ್ಲರ ಬಗ್ಗೆಯೂ ಕಾಳಜಿ ತೋರಿಸುತ್ತಾರೆ. ಅಕ್ಷಯ್ ನಟಿಸಿರುವ `ಏರ್ ಲಿಫ್ಟ್’ ಆಗಲೀ `ರುಸ್ತುಂ’ ಆಗಲೀ ಇಂತದ್ದೇ ಸಾಮಾಜಿಕ ಕಳಕಳಿಯಿರುವ ಚಿತ್ರವಾಗಿದ್ದು ಈಗ `ಟಾಯ್ಲೆಟ್-ಏಕ್ ಪ್ರೇಮ್ ಕಥಾ’ ಕೂಡಾ ಬಯಲು ಶೌಚಾಲಯದ ವಿರುದ್ಧ ಧ್ವನಿ ಎತ್ತುವ ಚಿತ್ರವಾಗಿದೆ. ಭೂಮಿ ಈ ಬಗ್ಗೆ ಮಾತಾಡುತ್ತಾ `ಸಾಮಾಜಿಕ ಕಳಕಳಿ ತೋರಿಸುವ ಯಾವ ವ್ಯಕ್ತಿಯೇ ಆಗಿರಲಿ, ಅವರು ಇತರರಿಗೆ ಮಾದರಿಯಾಗುತ್ತಾರೆ. ಅಕ್ಷಯ್ ಸರ್ ಈ ವಿಚಾರದಲ್ಲಿ ಈಗಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಅವರು ತನ್ನ ಪ್ರಸಿದ್ಧಿ ಹಾಗೂ ತನಗಿರುವ ಅಭಿಮಾನೀ ಬಳಗವನ್ನು ದೇಶದ ಒಳಿತಿಗಾಗಿ ಉಪಯೋಗಿಸುತ್ತಿದ್ದಾರೆ” ಎನ್ನುತ್ತಾಳೆ ಭೂಮಿ.

ಈ ಸಿನಿಮಾದಲ್ಲಿ ಹೊಸದಾಗಿ ಮದುವೆಯಾಗಿ ಬಂದ ಮಹಿಳೆ ಪತಿ ಮನೆಯಲ್ಲಿ ಟಾಯ್ಲೆಟ್ ಇಲ್ಲವೆಂದು ಅವರ ಮನೆಯನ್ನೇ ತೊರೆಯುತ್ತಾಳೆ. ಪತ್ನಿಯನ್ನು ಪುನಃ ಪಡೆಯಲು ಪತಿ ಟಾಯ್ಲೆಟ್ ಕಟ್ಟಲು ಪಡುವ ಶ್ರಮವೇ ಚಿತ್ರದ ಕಥಾವಸ್ತುವಾಗಿದೆ. ಈ ಚಿತ್ರದಲ್ಲಿ ಸಾಮಾಜಿಕ ಮೆಸೇಜನ್ನು ಹಾಸ್ಯಭರಿತವಾಗಿ ಹೇಳಿದ್ದಾರೆ ನಿದೇಶಕ ಶ್ರೀ ನಾರಾಯಣ ಸಿಂಗ್.

ಅಂದ ಹಾಗೆ ಭೂಮಿ ಈಗ ಆಯುಷ್ಮಾನ್ ಖುರಾನಾ ಜೊತೆ `ಶುಭ ಲಗ್ನ ಸಾವಧಾನ’ ಚಿತ್ರದಲ್ಲೂ ನಟಿಸುತ್ತಿದ್ದಾಳೆ. ಈಕೆ ಚಲಾವಣೆಯಲ್ಲಿರಬೇಕು ಎನ್ನುವ ಏಕೈಕ ಉದ್ದೇಶದಿಂದ ಆಫರ್ ಬಂದ ಚಿತ್ರಗಳನ್ನೆಲ್ಲ ಒಪ್ಪಿಕೊಳ್ಳುವುದಿಲ್ಲವಂತೆ. ಉತ್ತಮವಾದ ಸಂದೇಶ ಬೀರುವಂತಹ ಚಿತ್ರಗಳಲ್ಲಿಯೇ ನಟಿಸುವ ಬಯಕೆ ತನ್ನದು ಎನ್ನುತ್ತಾಳೆ ಭೂಮಿ.