ನೋಟು ಅಮಾನ್ಯ ಉದ್ದೇಶ ಈಡೇರಿತೆ ?

ಕಪ್ಪುಹಣ, ನಕಲಿ ನೋಟು, ಉಗ್ರರಿಗೆ ದೇಣಿಗೆ ಎಂಬ ಅಂತೆ ಕಂತೆ

ವಿಶೇಷ ವರದಿ

ಮಂಗಳೂರು : ಕೇಂದ್ರ ಸರಕಾರ ಒಂದು ಸಾವಿರ ಮತ್ತು ಐನೂರು ಮುಖ ಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಲು ದೇಶದಲ್ಲಿ ಚಲಾವಣೆಯಲ್ಲಿರುವ ಕಪ್ಪು ಹಣವನ್ನು ಮಟ್ಟ ಹಾಕಲು ಎಂದು ಹೇಳಿತ್ತು.

ಕಳೆದ ನವೆಂಬರ್ 8ರಂದು ರಾತ್ರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟೀವಿ ಚಾನಲುಗಳ ಮೂಲಕ ಭಾಷಣ ಮಾಡುತ್ತಾ ನೋಟುಗಳ ಚಲಾವಣೆ ನಿಷೇಧ ಮಾಡಿದ್ದರು. ಮರುದಿನ ಬ್ಯಾಂಕ್, ಮತ್ತೆರಡು ದಿನ ಎಂಟಿಎಂಗಳು ಬಂದ್ ಆಗಿದ್ದವು. ಇಂದೂ ಕೂಡ ಬಹುತೇಕ ಎಟಿಎಂಗಳು ಬಂದ್ ಆಗಿವೆ. ಬ್ಯಾಂಕ್ ಶಾಖೆಗಳಲ್ಲಿ ನಗದು ಹಣ ಇಲ್ಲ. ಕೆಲಸ ಮಾಡುವ ಶೇಕಡ ಹತ್ತರಷ್ಟು ಎಟಿಎಂಗಳಲ್ಲಿ ಹೊರಬರುವ ಎರಡು ಸಾವಿರ ರೂಪಾಯಿ ನೋಟಿನಿಂದ ಯಾವ ವ್ಯವಹಾರ ಮಾಡಲು ಜನಸಾಮಾನ್ಯರಿಗೆ ಸಾಧ್ಯವಾಗುತ್ತಿಲ್ಲ. “ದೇಶಕ್ಕಾಗಿ ಇನ್ನೂ ಸ್ವಲ್ಪ ದಿನ ಸಹಿಸಿಕೊಳ್ಳಿ” ಎನ್ನುತ್ತಿದ್ದಾರೆ ಭಕ್ತರು.

ನಿಜಕ್ಕೂ ಈ ಕ್ರಮದಿಂದ ದೇಶದ ಕಳ್ಳ ನೋಟಿನ ನಿಯಂತ್ರಣ ಆಗುತ್ತಿದೆಯೇ ? ಸರಕಾರ ಆಗಾಗ ಪ್ಲೇಟ್ ಬದಲಾಯಿಸುತ್ತಿದೆ. ಕಪ್ಪು ಹಣ ಮಾತ್ರವಲ್ಲ, ಭಯೋತ್ಪಾದಕರಿಗೆ ಹಣಕಾಸು ದೊರೆಯದಂತೆ ಮಾಡುವುದು ಇದರ ಉದ್ದೇಶ ಎನ್ನುತ್ತಿದೆ. ಮತ್ತೆರಡು ದಿನ ಕಳೆದಾಗ ಅದೇ ಸರಕಾರ ಹೇಳುತ್ತಿದೆ, ದೇಶದಲ್ಲಿರುವ ನಕಲಿ ನೋಟುಗಳ ಹಾವಳಿಯನ್ನು ನಿಯಂತ್ರಿಸಲು ಈ ಕ್ರಮ ಎಂದು. ಅಸಲಿಗೆ ಈ ಹೊಸ ನೋಟು ನಕಲಿಯಂತೆ ಕಾಣುತ್ತಿದೆ. ಮಾತ್ರವಲ್ಲದೆ, ಬಹಳ ಸುಲಭವಾಗಿ ಹೊಸ ಎರಡು ಸಾವಿರ ರೂಪಾಯಿ ನಕಲಿ ನೋಟುಗಳು ಬಂದಿರುವುದು ಹಾಸ್ಯಾಸ್ಪದವಾಗಿದೆ. ಇನ್ನು ತಪ್ಪುಗಳೇ ತುಂಬಿರುವ ಹೊಸ ಐನೂರು ನೋಟುಗಳ ಕತೆ ಬೇರೆ ಹೇಳಬೇಕಾಗಿಲ್ಲ.

ಅಮಾನ್ಯಗೊಂಡ ನೋಟುಗಳನ್ನು ನೇತ್ರಾವತಿಗೋ, ಗಂಗೆಗೋ ಎಸೆಯ ಬಹುದು, ಸುಟ್ಟು ಹಾಕಬಹುದು, ಗೊಬ್ಬರ ಮಾಡಬೇಕು ಎಂಬಿತ್ಯಾದಿ ಮಾತುಗಳು ಮೊದಲು ಕೇಳಿಬಂದಿದ್ದವು. ಮಂಗಳೂರು ನಗರದಲ್ಲೇ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ನೋಟುಗಳನ್ನು ಸುಟ್ಟುಹಾಕಬೇಡಿ ಎಂದು ಬ್ಯಾನರ್ ಹಾಕಿ ಪುಕ್ಕಟೆ ಪ್ರಚಾರ ಪಡೆದುಕೊಂಡಿತು. ಅಂತಹ ಯಾವ ವಿದ್ಯಮಾನಗಳು ನಡೆಯಲಿಲ್ಲ. ಈಗ ಬ್ಯಾಂಕುಗಳ ಪ್ರಕಾರ ಶೇಕಡ 90ರಷ್ಟು ಮಾತ್ರ ಚಲಾವಣೆಯಲ್ಲಿದ್ದ ಹಳೇ ನೋಟುಗಳು ಬ್ಯಾಂಕುಗಳ ತಿಜೋರಿಗೆ ಬಂದು ಬೀಳಬಹುದು. ಹಾಗದರೆ ಕಪ್ಪು ಹಣ ಎಲ್ಲಿ ಹೋಯಿತು ಎಂಬುದಕ್ಕೆ  ಉತ್ತರ ನೀಡಬೇಕಾಗಿದೆ.

ಈ ತಿಂಗಳಲ್ಲಿ ಎಂಟನೇ ತಾರೀಕಿನಿಂದ ಈಚೆಗೆ ಜನರು ಎಂಟು ಲಕ್ಷ ಕೋಟಿ ರೂಪಾಯಿ ಹಣವನ್ನು ಬ್ಯಾಂಕಿಗೆ ಹಾಕಿದ್ದಾರೆ. ಅದಲ್ಲದೆ, 33,498 ಕೋಟಿ ರೂಪಾಯಿಯ ಹಳೆ ನೋಟನ್ನು ಹೊಸ ನೋಟಿನೊಂದಿಗೆ ಬದಲಾಯಿಸಿಕೊಂಡಿದ್ದಾರೆ. ಬದಲಾಯಿಸಿಕೊಂಡಿದ್ದು ಕೇವಲ ಶೇಕಡ ಮೂರು ಮಾತ್ರ. ಹಾಗೇ ಒಟ್ಟು ಶೇಕಡ ಆರುವತ್ತರಷ್ಟು ಚಲಾವಣೆಯಲ್ಲಿ ಇಲ್ಲದ ಕರೆನ್ಸಿ ನೋಟುಗಳು ಹೊಸ ರೂಪ ತಳೆದು ವ್ಯವಸ್ಥೆಗೆ ಸೇರ್ಪಡೆ ಆಗಿದೆ. ಇನ್ನೂ ಶೇಕಡ ನಲ್ವತ್ತು ಬ್ಯಾಂಕುಗಳಿಗೆ ಬರಬೇಕಾಗಿದೆ. ಅದಕ್ಕಾಗಿ ಮೂವತ್ತು ದಿನಗಳು ಬಾಕಿ ಉಳಿದಿವೆ.

ಈಗಿನ ಲೆಕ್ಕಾಚಾರ ಪ್ರಕಾರ, ಬಹುತೇಕ ಹಳೇ ನೋಟುಗಳು ಬ್ಯಾಂಕುಗಳ ತಿಜೋರಿಗೆ ಸೇರಲಿವೆ. ಅದೂ ಬಿಳಿ ಹಣವಾಗಿ. ಹಾಗಿರುವಾಗ ಪವಿತ್ರ ಗಂಗಾ ನದಿಗೊ, ನೇತ್ರಾವತಿ ನದಿಗೊ ಅಥವ ಅರಬ್ಬಿ ಸಮುದ್ರಕ್ಕೊ ಬಿಸಾಡುವ ನೋಟುಗಳು ಏನೇನು ಉಳಿದಿರುವುದಿಲ್ಲ. ಅಂದರೆ ಕಪ್ಪು ಹಣ ಉಳಿದಿಲ್ಲ.

ಕೆಲವೊಮ್ಮೆ ಸಣ್ಣ ಪ್ರಮಾಣದ ಹಳೇ ನೋಟುಗಳು ಬ್ಯಾಂಕುಗಳಿಗೆ ಬರದೇ ಇರಲು ಸಾಧ್ಯವಿದೆ. ಅದು ಕಾಳಸಂತೆಕೋರರ ಬಳಿ ಇರುವ ಹಣವಲ್ಲ. ಬದಲಿಗೆ, ಬಡವರು, ಅಕ್ಷರಾಭ್ಯಾಸ ಇಲ್ಲದವರು, ಬ್ಯಾಂಕ್ ಅಕೌಂಟ್ ಇಲ್ಲದವರು, ಬ್ಯಾಂಕಿಗೆ ಬರಲಾರದ ವಯೋ ವೃದ್ಧರು ಮತ್ತು ಕೆಲವು ಮಂದಿಗೆ ತಮ್ಮ ಬಳಿ ಇರುವುದು ಅಮಾನ್ಯಗೊಂಡ ಹಣ ಎಂದು ಗೊತ್ತಿಲ್ಲದಿರುವ ಸಾಧ್ಯತೆ ಕೂಡ ಇದೆ. ಇಂತಹ ಹಣ ಬ್ಯಾಂಕಿಗೆ ಬಾರದೇ ಇರಬಹುದು.  ಬಹಳಷ್ಟು ಮಂದಿ ಎಲ್ಲ ವದಂತಿ, ಗುಮಾನಿಗಳು, ಬೆದರಿಸುವ ತಂತ್ರಗಳ ನಡುವೆ ಸಾಕಷ್ಟು ಪ್ರಮಾಣದಲ್ಲಿ ಜನರು ಹಳೇ ನೋಟುಗಳನ್ನು ಯಾವುದೇ ಮುಲಾಜು, ಹೆದರಿಕೆ ಇಲ್ಲದೆ ಬ್ಯಾಂಕುಗಳಿಗೆ ಜಮಾ ಮಾಡಿದ್ದಾರೆ. ಜಮಾ ಮಾಡಿದ ಹಣವನ್ನು ವಾಪಸ್ ತೆಗೆದುಕೊಳ್ಳುವ ತಾಪತ್ರಾಯ ಬಿಟ್ಟರೆ ಜನರಿಗೆ ಆದಾಯ ತೆರಿಗೆ ಅಧಿಕಾರಿಗಳ ಹೆದರಿಕೆ ಇದ್ದಂತಿಲ್ಲ. ಅದಕ್ಕೆ ಸಕಾರಣಗಳಿವೆ.

ಈ ತಮ್ಮ ಬ್ಯಾಂಕುಗಳಲ್ಲಿ ಇರುವ ಹಣಕ್ಕೆ ಆದಾಯ ತೆರಿಗೆ ವಿವರಣೆ ನೀಡಬೇಕಾಗಿರುವುದು ಮುಂದಿನ ವರ್ಷದ ಜುಲೈ ತಿಂಗಳಿಗೆ ಮುನ್ನ. ಇನ್ನು ಪ್ರಕರಣ ದಾಖಲಾದರೆ ಇತ್ಯರ್ಥ ಆಗಲು ಹಲವು ವರ್ಷ ಬೇಕು. ಅದಕ್ಕೆ ಚಿಂತೆ ಬೇಡ. ಅದಕ್ಕೂ ಹೆಚ್ಚಾಗಿ 120 ಕೋಟಿ ಜನ ಸಂಖ್ಯೆ ಇರುವ ಮಹಾನ್ ದೇಶದಲ್ಲಿ ಈಗ ತೆರಿಗೆ ಪಾವತಿಸುವವರು ಕೇವಲ ಎರಡೂವರೆ ಕೋಟಿ ಮಂದಿ ಮಾತ್ರ. ಮಾತ್ರವಲ್ಲದೆ, ಈಗ ಇರುವುದು ಕೇವಲ ಆರು ಸಾವಿರ ಆದಾಯ ತೆರಿಗೆ ಅಧಿಕಾರಿಗಳು ಮಾತ್ರ. ಅದರಲ್ಲೂ ಒಂದು ಸಾವಿರ ಹುದ್ದೆಗಳು ಖಾಲಿ ಬಿದ್ದಿವೆ. ಇಷ್ಟು ಮಂದಿ ಆದಾಯ ತೆರಿಗೆ ಅಧಿಕಾರಿಗಳು ಎಷ್ಟು ಕೋಟಿ ಮಂದಿಯ ಬ್ಯಾಂಕ್ ಠೇವಣಿ ಪರಿಶೀಲನೆ ಮಾಡಿ ಕಾನೂನು ಪ್ರಕಾರ ನೋಟೀಸ್ ನೀಡಬಲ್ಲರು ಎಂಬುದು ಯಕ್ಷಪ್ರಶ್ನೆ.