ರಾಫೆಲ್ ಖರೀದಿಗೆ ಭಾರತ ಹೆಚ್ಚಿನ ಬೆಲೆ ನೀಡಿದೆಯೇ ?

  • ಅಜಯ್ ಶುಕ್ಲ

2015ರ ಎಪ್ರಿಲ್ 10ರಂದು ಫ್ರೆಂಚ್ ಅಧ್ಯಕ್ಷ ಹೊಲಾಂಡೆ ಅವರೊಡನೆ ಪತ್ರಿಕಾಗೋಷ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ-ಭಾರತಕ್ಕೆ ಯುದ್ಧ ವಿಮಾನಗಳು ಅತ್ಯಗತ್ಯವಾಗಿರುವ ಹಿನ್ನೆಲೆಯಲ್ಲಿ ನಾನು ವಿಮಾನ ಖರೀದಿಸಲು ಅಧ್ಯಕ್ಷರೊಡನೆ ಮಾತುಕತೆ ನಡೆಸಿ 36 ವಿಮಾನಗಳನ್ನು ಹಾರಾಡುವ ಸ್ಥಿತಿಯಲ್ಲಿ ಖರೀದಿಸಲು ನಿರ್ಧರಿಸಿದ್ದೇನೆ. ಈ ವಿಮಾನಗಳನ್ನು ಉತ್ತಮ ವ್ಯಾಪಾರ ಒಪ್ಪಂದದ ಅನುಸಾರ ಭಾರತಕ್ಕೆ ಸರಬರಾಜು ಮಾಡಲಾಗುತ್ತದೆ ಎಂದು ಹೇಳಿದ್ದರು. ಈ ಪ್ರತ್ಯೇಕ ಒಪ್ಪಂದದಲ್ಲಿ 2007ರಲ್ಲಿ 126 ಯುದ್ಧವಿಮಾನಗಳ ಖರೀದಿಗಾಗಿ ಏರ್ಪಟ್ಟಿದ್ದ ಒಪ್ಪಂದದ ಅನುಸಾರ ಟೆಂಡರ್ ಕರೆಯುವುದೇ ಆಗಿತ್ತು. ಈಗ ಮೋದಿ ಸರ್ಕಾರ 36 ರಾಫೆಲ್ ವಿಮಾನಗಳನ್ನು 58000 ಕೋಟಿ ರೂ.ಗಳನ್ನು ನೀಡಿ ಖರೀದಿಸುತ್ತಿದೆ ಇದು ಡಸ್ಸಾಲ್ಟ್ ಕಂಪನಿಯ ದರಗಳಿಗಿಂತಲೂ ಅಧಿಕವಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ವಸ್ತುಸ್ಥಿತಿಯನ್ನು ಅರಿಯಲು ಸರ್ಕಾರ ಯಾವುದೇ ನಿರ್ದಿಷ್ಟ ಮಾಹಿತಿ ನೀಡುತ್ತಿಲ್ಲ. ರಕ್ಷಣಾ ಸಚಿವಾಲಯವೂ ನುಣುಚಿಕೊಳ್ಳುತ್ತಿದೆ.

ಆದರೆ ಅದೃಷ್ಟವಶಾತ್ 2015ರಲ್ಲಿ ಸಹಿ ಮಾಡಿದ 58000 ಕೋಟಿ ರೂ ಒಪ್ಪಂದಕ್ಕೆ ಪುರಾವೆ ದೊರೆತಿದೆ. ಈ ಒಪ್ಪಂದದ ಪ್ರಕಾರ ಪ್ರತಿಯೊಂದು ರಾಫೆಲ್ ವಿಮಾನದ ದರ 686 ಕೋಟಿ ರೂ ಆಗಿರುತ್ತದೆ. 681 ಕೋಟಿ ರೂ.ಗಳಂತೆ 28 ಒಂದು ಸೀಟಿನ ಯುದ್ಧ ವಿಮಾನಗಳು, 703 ಕೋಟಿ ರೂ.ಗಳಂತೆ 8 ಎರಡು ಸೀಟಿನ ವಿಮಾನಗಳನ್ನು ಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇಷ್ಟೇ ಅಲ್ಲದೆ ಭಾರತೀಯ ವಾಯುಪಡೆ 1095 ಕೋಟಿ ರೂ ಭಾರತಕ್ಕೆ ವಿಶಿಷ್ಟವಾಗುವಂತಹ  ಇತರ ಸಲಕರಣೆಗಳನ್ನು ಖರೀದಿಸಲು ಒಪ್ಪಿದೆ. 4507 ಕೋಟಿ ರೂ ನೀಡಿ ಮೀಟಿಯಾರ್ ಮತ್ತು ಸ್ಕಾಲ್ಪ್ ಕ್ಷಿಪಣಿಗಳನ್ನು ಖರೀದಿಸಲಾಗುತ್ತಿದೆ. 1105 ಕೋಟಿ ರೂ ನೀಡಿ ಬಿಡಿ ಭಾಗಗಳು ಮತ್ತು ಇಂಜಿನ್ ಖರೀದಿಸಲಾಗುತ್ತಿದೆ. ರಾಫೆಲ್ ವಿಮಾನಗಳ ಶೇ 75ರಷ್ಟು ಸದಾ ಕ್ರಿಯೆಯಲ್ಲಿ ತೊಡಗಿರುವಂತೆ ಎಚ್ಚರವಹಿಸಲಾಗಿದೆ. ಭಾರತೀಯ ವಾಯುಪಡೆ ರಾಫೆಲ್ ವಿಮಾನಕ್ಕೆ ನೀಡುತ್ತಿರುವ ದರಗಳು ಹೆಚ್ಚಾಗಿರುವುದು ಫ್ರೆಂಚ್ ಸರ್ಕಾರದ ಬಿಡುಗಡೆ ಮಾಡಿರುವ ಕೆಲವು ಅಂಕಿಅಶಂಗಳಿಂದಲೇ ಸ್ಪಷ್ಟವಾಗುತ್ತದೆ. ಈಜಿಪ್ಟ್ ಮತ್ತು ಕಟಾರ್ ದೇಶಗಳೂ ಸಹ ಹೆಚ್ಚು ಕಡಿಮೆ ಇದೇ ದರದಲ್ಲಿ ರಾಫೆಲ್ ವಿಮಾನವನ್ನು ಖರೀದಿಸುತ್ತಿವೆ.