ಭಗವದ್ಗೀತೆಯ 10 ಪ್ರತಿಗಳಿಗೆ 3.8 ಲಕ್ಷ ರೂ ವೆಚ್ಚ ಮಾಡಿದ ಹರ್ಯಾಣಾದ ಬಿಜೆಪಿ ಸರಕಾರ !

 

2017ರ ನವಂಬರಿನಲ್ಲಿ ನಡೆದ ಅಂತಾರಾಷ್ಟ್ರೀಯ ಗೀತಾ ಮಹೋತ್ಸವದ ಸಂದರ್ಭದಲ್ಲಿ ಹರಿಯಾಣ ಸರ್ಕಾರ ಭಗವದ್ಗೀತೆಯ ಹತ್ತು ಪುಸ್ತಕಗಳನ್ನು ಖರೀದಿಸಲು 3,79,500 ರೂ ಖರ್ಚು ಮಾಡಿರುವ ಪ್ರಕರಣ ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದ್ದು, ಹಿಸ್ಸಾರ್ ಜಿಲ್ಲೆಯ ಮಾಹಿತಿ ಹಕ್ಕು ಕಾರ್ಯಕರ್ತ ರಾಹುಲ್ ಸೆಹ್ರಾವತ್ ಈ ವಿಷಯವನ್ನು ಬಯಲು ಮಾಡಿದ್ದಾರೆ.

ಒಂದು ವರದಿಯ ಅನುಸಾರ ಈ ಸಂಪುಟಗಳಿಗೆ ವಿಶೇಷವಾದ ಕಾಗದ ಬಳಸಿ ಸಿದ್ಧಪಡಿಸಲಾಗಿದ್ದು, ಕೃತಿಗಳು ಪ್ರಾಚೀನ ಹಸ್ತಪ್ರತಿಗಳಂತೆ ಕಾಣುವಂತೆ ಮಾಡಲಾಗಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಹಾಜರಿದ್ದ ವಿವಿಐಪಿ ಅತಿಥಿಗಳಿಗೆ ನೀಡುವ ಸಲುವಾಗಿ ಈ ಸಂಪುಟಗಳನ್ನು ಸಿದ್ಧಪಡಿಸಿತ್ತು ಎನ್ನಲಾಗಿದೆ. ಆರ್ಟಿಐ ಮಾಹಿತಿಯ ಅನುಸಾರ ಹರಿಯಾಣ ಸರ್ಕಾರ ಬಾಲಿವುಡ್ ನಟಿ ಮತ್ತು ಸಂಸದೆ ಹೇಮಾಮಾಲಿನಿಗೆ ಹದಿನೈದು ಲಕ್ಷ ರೂ ಮತ್ತು ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಮನೋಜ್ ತಿವಾರಿಗೆ ಹತ್ತು ಲಕ್ಷ ರೂ ಸಂಭಾವನೆಯನ್ನೂ ನೀಡಿದೆ.

ಆದರೆ ಕುರುಕ್ಷೇತ್ರ ಅಭಿವೃದ್ಧಿ ಮಂಡಲಿ ನೀಡಿರುವ ಮಾಹಿತಿಯ ಅನುಸಾರ ಸಮಾರಂಭಕ್ಕೆ ಕೇವಲ 4.32 ಕೋಟಿ ರೂ ಖರ್ಚುಮಾಡಲಾಗಿದೆ. ಸಮಾರಂಭಕ್ಕೆ ನೀಡಲಾಗಿರುವ 15 ಕೋಟಿ ರೂ.ಗಳಿಗೆ ಲೆಕ್ಕ ನೀಡಲು ಮಂಡಲಿ ನಿರಾಕರಿಸುತ್ತಿದೆ. ಭಗವದ್ಗೀತೆಯ ಹತ್ತು ಸಂಪುಟಗಳಿಗೆ ನೀಡಿರುವ 3.8 ಲಕ್ಷ ರೂ.ಗಳನ್ನು ತನ್ವಿ ಸ್ಟೇಷನರ್ಸ್ ಎಂಬ ವ್ಯಾಪಾರಿಗೆ ನೀಡಲಾಗಿದೆ. ಈ ಆರೋಪಗಳನ್ನು ಅಲ್ಲಗಳೆದಿರುವ ಹರಿಯಾಣದ ಮುಖ್ಯಮಂತ್ರಿ ಎಂ ಎಲ್ ಖಟ್ಟರ್ ಸರ್ಕಾರ ಈ ಹಣವನ್ನು ಜನರಲ್ಲಿ ಜಾಗೃತಿ ಮೂಡಿಸಲು ಬಳಸಿದ್ದು, ಇದು ಸಮಾಜದ ಹಿತಾಸಕ್ತಿಯಿಂದ ಅಗತ್ಯವಾಗಿತ್ತು ಎಂದು ಹೇಳಿದೆ. ಆದರೆ ಸಾರ್ವಜನಿಕ ಹಣವನ್ನು ಪೋಲು ಮಾಡಿರುವುದಕ್ಕೆ ಆರ್ಟಿಐ ಮಾಹಿತಿಯೇ ಸಾಕ್ಷಿಯಾಗಿದೆ ಎಂದು ಐ ಎನ್ ಎಲ್ ಡಿ ಪಕ್ಷದ ನೇತಾರ ಮತ್ತು ಹಿಸ್ಸಾರ್ ಸಂಸದ ದುಷ್ಯಂತ್ ಚೌತಾಲಾ ಹೇಳಿದ್ದಾರೆ.

 

LEAVE A REPLY