ಮೂಡಬಿದ್ರೆ ಪುರಸಭೆ ಅಧ್ಯಕ್ಷ ಹರಿಣಾಕ್ಷಿ, ಉಪಾಧ್ಯಕ್ಷ ವಿನೋದ್ ಸೆರಾವೊ ಆಯ್ಕೆ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಮೂಡುಬಿದಿರೆ ಪುರಸಭೆಗೆ ನೂತನ ಅಧ್ಯಕ್ಷರಾಗಿ ಹರಿಣಾಕ್ಷಿ ಹಾಗೂ ಉಪಾಧ್ಯಕ್ಷರಾಗಿ ವಿನೋದ್ ಸೆರಾವೋ ಆಯ್ಕೆಯಾಗಿದ್ದಾರೆ. ಇವರಿಬ್ಬರೂ ಕಾಂಗ್ರೆಸ್ ಬೆಂಬಲಿತ ಸದಸ್ಯರು.

harinakshi

ಸಾಮಾನ್ಯ ಮಹಿಳೆ ಮೀಸಲಾತಿಯಿರುವ ಅಧ್ಯಕ್ಷ ಸ್ಥಾನ ಹಾಗೂ ಸಾಮಾನ್ಯ ಮೀಸಲಾತಿಯಿರುವ ಉಪಾz sÀ್ಯಕ್ಷ ಸ್ಥಾನಕ್ಕೆ ಬುಧವಾರ ಪುರಸಭೆ ಸಭಾಭವನದಲ್ಲಿ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಏಕೈಕ ನಾಮಪತ್ರ ಸಲ್ಲಿಕೆ ಯಾಗಿದ್ದರಿಂದ ಚುನಾವಣಾಧಿಕಾರಿ ಮುಹ್ಮದ್ ಇಸಾಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಮಾರೂರು ಕ್ಷೇತ್ರದಿಂದ ಸತತ ಮೂರು ಬಾರಿ ಪುರಸಭೆಗೆ ಆಯ್ಕೆಯಾದ ಹರಿಣಾಕ್ಷಿ ಎರಡನೇ ಬಾರಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದವರಲ್ಲಿ ಇವರು ಎರಡನೆಯವರು. ಈ ಹಿಂದೆ ನಾರಾಯಣ ದೇವಾಡಿಗ ಅವರು ಸತತ ಎರಡು ಬಾರಿ ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಸರಕಾರದ ನಿಯಮದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರಾವಧಿ  ಎರಡೂವರೆ ವರ್ಷಗಳಿದ್ದರೂ ಶಾಸಕ ಅಭಯಚಂದ್ರ ಅವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ನಿರ್ಧಾರದಂತೆ ಈಗ ಆಯ್ಕೆಯಾದ ಇಬ್ಬರು ಅಭ್ಯರ್ಥಿಗಳ ಅಧಿಕಾರಾವಧಿಯನ್ನು ಒಂದೂಕಾಲು ವರ್ಷಕ್ಕೆ ಕಡಿತಗೊಳಿಸಲಾಗಿದ್ದು ಎರಡನೇ ಅವಧಿಗೆ ನಿರ್ಗಮನ ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ ಅವರಿಗೆ ಅಧ್ಯಕ್ಷ ಸ್ಥಾನ ಹಾಗೂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್‍ಗೆ ಉಪಾಧ್ಯಕ್ಷ ಸ್ಥಾನವನ್ನು ನೀಡಲು ಪಕ್ಷ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.