ಸ್ವಾರ್ಥಿ ಹರಿಕೃಷ್ಣ ಬಿಜೆಪಿಗೆ

ನಿನ್ನೆ ಕಮ್ಯುನಲ್ ಆಗಿದ್ದವರು ಇಂದು ಸ್ವೀಕಾರಾರ್ಹರಾಗಿದ್ದು ಹೇಗೆ ?

 ವಿಶ್ಲೇಷಣೆ

ಹಲವು ತಿಂಗಳಿನಿಂದ ನಡೆಯುತ್ತಿದ್ದ ಹರಿಕೃಷ್ಣ ಬಂಟ್ವಾಳ್ ನಾಟಕಕ್ಕೆ ತೆರೆ ಬಿದ್ದಿದೆ. ಕಾಂಗ್ರೆಸ್ಸಿನ ಹಿರಿಯ ಮುಖಂಡ, ಕೇಂದ್ರದ ಮಾಜಿ ಮಂತ್ರಿ ಬಿ ಜನಾರ್ದನ ಪೂಜಾರಿಯ ಪರಮಾಪ್ತನಾಗಿ ಗುರುತಿಸಿಕೊಂಡಿದ್ದ ಹರಿಕೃಷ್ಣ ಬಂಟ್ವಾಳ್ ಕೊನೆಗೂ ಬಿಜೆಪಿಯ ಪರಿವರ್ತನಾ ರ್ಯಾಲಿ ವೇಳೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡ್ಯೂರಪ್ಪ ಅವರು ಬಿಜೆಪಿ ಪಕ್ಷದ ಧ್ವಜವನ್ನು ಹರಿಕೃಷ್ಣ ಬಂಟ್ವಾಳ್ ಅವರಿಗೆ ನೀಡುವ ಮೂಲಕ ಹರಿಕೃಷ್ಣರನ್ನು ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡಿದ್ದಾರೆ.

ಕೇವಲ ತನ್ನ ಸ್ವಾರ್ಥ ರಾಜಕಾರಣವನ್ನೇ ಮುಂದೆ ಮಾಡಿಕೊಂಡು ಬಂದಿರುವ ಹರಿಕೃಷ್ಣ ಬಂಟ್ವಾಳಗೆ ಇದೀಗ ಪಕ್ಷಾಂತರ ಮಾಡಿದಾಕ್ಷಣ ಬಿಜೆಪಿ ಪ್ರಿಯವಾಗತೊಡಗಿದೆ. ಹಿಂದೂತ್ವವನ್ನು, ಬಿಜೆಪಿ ನಾಯಕರನ್ನು ಒಂದು ಸಂದರ್ಭದಲ್ಲಿ ಬಾಯಿಗೆ ಬಂದಂತೆ ಬೈಯ್ಯತ್ತಿದ್ದ ಇದೇ ಹರಿಕೃಷ್ಣ ಬಂಟ್ವಾಳ್ ಇನ್ಮೇಲೆ ಅದೇ ನಾಲಗೆಯಲ್ಲಿ ಬಿಜೆಪಿ ನಾಯಕರ ಗುಣಗಾನ ಮಾಡಲಿದ್ದಾರೆ.

ತನ್ನ ಗುರು ಜನಾರ್ದನ ಪೂಜಾರಿಯವರನ್ನು ಕಾಂಗ್ರೆಸ್ ಪಕ್ಷ ನಡು ನೀರಿನಲ್ಲಿ ಕೈಬಿಟ್ಟಿತು. ಪಕ್ಷದಲ್ಲಿ ಅವರಿಗೆ ಇದೀಗ ಯಾವುದೇ ಗೌರವ ನೀಡುತ್ತಿಲ್ಲ ಎಂದು ಬಾಯಿ ಬಡಿದುಕೊಂಡಿದ್ದ ಹರಿಕೃಷ್ಣ ತಾನು ಪೂಜಾರಿಯವರ ಆಶೀರ್ವಾದವನ್ನು ಪಡೆದುಕೊಂಡೇ ಬಿಜೆಪಿಗೆ ಸೇರಿದೆ ಎಂದು ಯಾವ ನಾಲಗೆಯಲ್ಲಿ ಹೇಳುತ್ತಾರೋ ಗೊತ್ತಾಗುತ್ತಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದಲ್ಲಿನ ಕೆಲವು ನಾಯಕರ ಬಗ್ಗೆ ಇನ್ನಿಲ್ಲದ ಟೀಕೆ ಮಾಡುವ ಜನಾರ್ದನ ಪೂಜಾರಿ ಪಕ್ಷದಿಂದ ತನಗೆ ಅದೆಷ್ಟೇ ನೋವಾಗಿದ್ದರೂ ಪಕ್ಷಕ್ಕೆ ನಿಷ್ಠಾವಂತರಾಗಿದ್ದಾರೆ. ಪಕ್ಷಾಂತರದ ಮಾತೆತ್ತಿಲ್ಲ. ಆದರೆ ಹರಿಕೃಷ್ಣ ಬಂಟ್ವಾಳ್, ತನಗೆ ಎಂಎಲ್ಸಿ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ ಎನ್ನುವ ಒಂದೇ ಕಾರಣಕ್ಕೆ ಪಕ್ಷದಿಂದ ಸಿಡಿದೆದ್ದು, ಹೊರಬಂದು ಇದೀಗ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಇದೀಗ ಅವರಿಗೆ ಟಾರ್ಗೆಟ್ ಆಗಿರುವುದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ. ಸಚಿವ ರೈ ಅಧಿಕಾರ ದುರುಪಯೋಗಪಡಿಸಿಕೊಂಡು ತಮ್ಮ ಪತ್ನಿ ಹೆಸರಿನಲ್ಲಿ ಮಾಣಿಯಲ್ಲಿ ಬೇನಾಮಿ ಆಸ್ತಿ ಕೂಡಿಟ್ಟಿದ್ದಾರೆ ಎಂದು ಕೂಗಾಡುತ್ತಿದ್ದಾರೆ. ಆದರೆ ಅವರು ಮಾಡುತ್ತಿರುವ ಆರೋಪಗಳಿಗೆ ದಾಖಲೆ ಇಲ್ಲ. ರೈ ಅಧಿಕಾರ ಪಡೆದುಕೊಂಡಂದಂದಿನಿಂದ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಹೇಳುವ ಹರಿಕೃಷ್ಣ ಬಂಟ್ವಾಳ್ ಅವರು ಇದುವರೆಗೆ ಬಾಯಿ ಮುಚ್ಚಿಕೊಂಡಿದ್ದೇಕೆ ಎಂದು ಅವರು ಜನತೆ ಮುಂದೆ ಹೇಳಬೇಕಾಗಿದೆ. ಅಷ್ಟೊಂದು ಪಾಪಪ್ರಜ್ಞೆ ಕಾಡುತ್ತಿರುವವರಿಗೆ ಈ ಸಂಗತಿಯನ್ನು ಕಾಂಗ್ರೆಸ್ಸಿನಲ್ಲಿದ್ದಾಗಲೇ ಹಿಂದೆಯೇ ಹೇಳಬಹುದಾಗಿತ್ತಲ್ಲ ?

ಬಾಲಂಗೋಚಿ ರಾಜಕಾರಣ ಮಾಡಿದ ಹರಿಕೃಷ್ಣರಿಗೆ ಇದೀಗ ಏಕಾಏಕಿ ದೇಶ ಒಡೆಯೋ ಪಕ್ಷ ಕಾಂಗ್ರೆಸ್, ದೇಶ ಪ್ರೇಮಿ ಪಕ್ಷ ಬಿಜೆಪಿ ಎನ್ನುವ ಅರಿವಾಗಿದೆಯಂತೆ ! ಕನಿಷ್ಟ ತತ್ವ ನಿಷ್ಠೆ, ಪಕ್ಷ ನಿಷ್ಠೆಯನ್ನೂ ಹೊಂದದ ಹರಿಕೃಷ್ಣರಿಂದ ಜನತೆ ಇನ್ನು ದೇಶ ಪ್ರೇಮದ ಪಾಠ ಕಲಿಯಬೇಕಾಗಿರುವುದು ದೌರ್ಭಾಗ್ಯ.

ಪಕ್ಷಾಂತರ ಮಾಡಿದಾಕ್ಷಣ ಇವರು ಹೇಳಿದ್ದೆಲ್ಲವನ್ನೂ ಕೇಳಲು ಜಿಲ್ಲೆಯ ಜನತೆ ಕಿವಿ ಮೇಲೆ ಹೂ ಇಟ್ಟುಕೊಂಡಿದ್ದಾರೆಯೇ ? ಮಾತು ಮಾತಿಗೂ ಬಿಲ್ಲವರು ಎಂದು ಹೇಳುವ ಹರಿಕೃಷ್ಣರು ಒಂದು ಜಾತಿ ಲೀಡರ್ ಎಂದು ಕರೆಸಿಕೊಳ್ಳುವುದಾದರೆ ರಾಷ್ಟ್ರೀಯ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿಯಲ್ಲಿ ಕೆಲಸ ಮಾಡಲು ಅರ್ಹರೇ ? ಜನಾರ್ದನ ಪೂಜಾರಿ ಅವರ ಒಡನಾಟದಲ್ಲಿ ಗೋಕರ್ಣನಾಥ ದೇವಸ್ಥಾನದಲ್ಲಿ ಸಮಿತಿಯೊಳಗೆ ಸೇರಿ ಪ್ರಚಾರ ಪಡೆದುಕೊಂಡಾಕ್ಷಣ ಹರಿಕೃಷ್ಣರು ಬಿಲ್ಲವರ ಪ್ರತಿನಿಧಿ ಎಂದರೆ ಅದು ಅವರ ಮೂರ್ಖತನದ ಪರಮಾವಧಿ. ಬಿಲ್ಲವರು ತನ್ನ ಬಳಿ ಇದ್ದಾರೆ ಅಂದರೆ ಈ ಬಾರಿ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಗ್ಯಾರಂಟಿ ಎಂಬ ಭ್ರಮೆಯಲ್ಲಿದ್ದಾರೆ.

ಹರಿಕೃಷ್ಣರೇ, ಇನ್ನಾದರೂ ನಿಮ್ಮ ಭ್ರಮಾಲೋಕದ ರಾಜಕೀಯ ಬಿಟ್ಟು, ಸತ್ಯ ಸಂಗತಿ ಏನೆಂದು ತಿಳಿದುಕೊಳ್ಳಿ. ನಿಮಗೆ ಬೇಕಾದಾಗ ಕಾಂಗ್ರೆಸ್ಸನ್ನು ಹೊಗಳಿ ಬೇಡವಾದಾಗ ಆರೋಪಗಳ ಮೂಟೆ ಹೊರಿಸಿ ಇಟ್ಟಾಕ್ಷಣ ಜನ ನಿಮ್ಮ ಮಾತನ್ನು ನಂಬುವುದಿಲ್ಲ. ರಾಜಕೀಯವನ್ನು ನಿಮ್ಮ ಆಟದ ದಾಳವಾಗಿ ಬಳಸಬೇಡಿ. ನಿಮ್ಮ ಸ್ವಾರ್ಥ ರಾಜಕಾರಣ ನಿಮಗೆ ಮುಳುವಾಗಲಿದೆಯೇ ವಿನಾ ಬಿಜೆಪಿ ಪಕ್ಷಕ್ಕೆ ಗೆಲುವನ್ನು ತಂದುಕೊಡುವುದು ಮರೀಚಿಕೆ. ಸ್ವಾರ್ಥ ರಾಜಕಾರಣ, ಸಮಯಸಾಧಕತನ, ವೃಥಾ ಆರೋಪದಿಂದ ನಿಮ್ಮ ವ್ಯಕ್ತಿತ್ವವನ್ನು ನೀವೇ ಜನತೆ ಮುಂದೆ ಹರಾಜು ಹಾಕುತ್ತಿದ್ದೀರಿ.