ಮುಂಬೈಗೆ ಗೆಲುವು ತಂದ ರಾಣಾ, ಪಾಂಡ್ಯಾ, ರಶೀದ್ ಮ್ಯಾಜಿಕ್ ಸ್ಪೆಲ್

ಬೊಂಬಾಟ್ ಸೂಪರ್ ಸಂಡೆ ಮ್ಯಾಚ್

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಭಾನುವಾರ ನಡೆದ ಐಪಿಎಲ್ ಟೂರ್ನಿಯ ಎರಡು ಪಂದ್ಯಗಳನ್ನು ವೀಕ್ಷಿಸಿದ ಕ್ರಿಕೆಟ್ ಪ್ರೇಮಿಗಳು ನಿಜಕ್ಕೂ ಸಖತ್ ಖುಷಿಪಟ್ಟರು. ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಗುಜರಾತ್ ಲಯನ್ಸ್ ತಂಡವನ್ನು ಮಣಿಸಿದರೆ, ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ  ಮುಂಬೈ ಇಂಡಿಯನ್ಸ್ ರೋಚಕ  ಗೆಲುವು ಸಾಧಿಸಿದೆ.

ಅದರಲ್ಲೂ ಮುಂಬೈ  ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಣ ಪಂದ್ಯ ಪ್ರೇಕ್ಷಕರನ್ನು  ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡಿತು. ಅಷ್ಟು ರೋಮಾಂಚನಕಾರಿಯಾಗಿ ಈ ಪಂದ್ಯ ಸಾಗಿತು. ಖಂಡಿತವಾಗಿಯೂ  ಈ ಪಂದ್ಯ ಕೆಕೆಆರ್ ತಂಡದ ಪರವಾಗಿತ್ತು. ಆದರೆ, ನಿತೇಶ್ ರಾಣಾ ಮತ್ತು ಹಾರ್ದಿಕ್ ಪಾಂಡ್ಯ ಪ್ರದರ್ಶಿಸಿದ ಅತ್ಯದ್ಭುತ ಬ್ಯಾಟಿಂಗ್ ನಿಂದ ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ನಾಲ್ಕು ವಿಕೆಟ್ ರೋಚಕ ಗೆಲುವು ಪಡೆಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ತಂಡ ಕನ್ನಡಿಗ ಮನೀಷ್ ಪಾಂಡೆ  ಅವರ ಸ್ಪೋಟಕ ಆಟದ ನೆರವಿನಿಂದ 7 ವಿಕೆಟಿಗೆ 178 ರನ್ ದೊಡ್ಡ ಮೊತ್ತವನ್ನು ಸೇರಿಸಿತು.

ಮನೀಷ್ 5 ಸಿಕ್ಸರ್, 5 ಬೌಂಡರಿಗಳ 81 ರನ್ ಬಾರಿ ಸಿ ತಂಡಕ್ಕೆ ನೆರವಾದರು.

ಕೆಕೆಆರ್ ನೀಡಿದ ಬಿಗ್ ಟಾರ್ಗೆಟನ್ನು ಮುಂಬೈ ಕೊನೆಯ ಓವರಿನ ಕೊನೆಯ ಎಸೆತದಲ್ಲಿ ತಲುಪಿತು. ಪಾರ್ಥಿವ್ ಪಟೇಲ್ – ಜೊಸ್ ಬಟ್ಲರ್ ಜೋಡಿ 65 ರನ್ ಉತ್ತಮ ಆರಂಭ ನೀಡಿದರೂ ಮಧ್ಯಮ ಸರದಿ ದಾಂಡಿಗರ ವೈಫಲ್ಯದಿಂದ ಪಂದ್ಯ ಕೆಕೆಆರ್ ತಂಡದ ಪರವಾಗಿತ್ತು. ಆದರೆ, ನಿತೇಶ್ ರಾಣಾ (50 ರನ್) ಹಾಗೂ ಹಾರ್ದಿಕ್ ಪಾಂಡ್ಯಾ (11ಎಸೆತದಲ್ಲಿ  29 ರನ್) ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಗೆಲುವು ತಂದಿತ್ತರು. ಐಪಿಎಲ್ಲಿನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ನಿತೇಶ್ ರಾಣಾ ಪಂದ್ಯ ಶ್ರೇಷ್ಠರಾದರು.

ಹೈದರಾಬಾದಿಗೆ ಜಯ

ತವರು ನೆಲದಲ್ಲಿ ನಡೆದ  ಪಂದ್ಯದಲ್ಲಿ ಹೈದರಾಬಾದ್ ಗೆಲುವು ಪಡೆಯಿತು. ಅಫ್ಘಾನಿಸ್ಥಾನದ ಯುವ ಬೌಲರ್ ರಶೀದ್ ಖಾನ್ ಅವರ ಮಾರಕ ಸ್ಪಿನ್ ದಾಳಿಗೆ ಗುಜರಾತ್ ಲಯನ್ಸ್ ಬೆದರಿತು. ಗುಜರಾತ್  135 ರನ್ ಗಳಿಸಲು ಮಾತ್ರ  ಶಕ್ತವಾಯಿತು.

ಲಯನ್ಸ್ ತಂಡದ ಅಲ್ಪ ಮೊತ್ತವನ್ನು ಸನ್ ರೈಸರ್ಸ್ ಹೈದರಾಬಾದ್ ಒಂದು ವಿಕೆಟ್ ನಷ್ಟದಲ್ಲಿ ತಲುಪಿ ಗೆಲುವಿನ ನಗೆಯನ್ನು ಬೀರಿತು. ನಾಯಕ  ಡೇವಿಡ್ ವಾರ್ನರ್ ಬರಸಿಡಿಲಿನ ಬ್ಯಾಟಿಂಗ್ (76 ರನ್) ನಡೆಸಿ ತಂಡಕ್ಕೆ ಜಯ ತಂದು ಕೊಟ್ಟರು. 13 ರನ್ನಿಗೆ 3 ವಿಕೆಟ್ ಪಡೆದ ಹೈದರಾಬಾದ್ ತಂಡದ ರಶೀದ್ ಖಾನಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.