ವಸತಿ ನಿಲಯದಲ್ಲಿ  ಮಕ್ಕಳಿಗೆ ಕಿರುಕುಳ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮುಂಡಗೋಡ : ಪಟ್ಟಣದ ಗಾಂಧಿನಗದ ಲೋಟಸ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿನಿಲಯದಲ್ಲಿ ಮಕ್ಕಳಿಗೆ ಮಾನಸಿಕ ಕಿರುಕುಳ ಹಾಗೂ ಒತ್ತಾಯಪೂರ್ವಕವಾಗಿ ಕ್ರಿಶ್ಚಿಯನ್ ಧರ್ಮವನ್ನು ಪ್ರೇರೇಪಿಸುವ ಯೇಸು ಕ್ರಿಸ್ತನ ಪುಸ್ತಕವನ್ನು ನೀಡಿ ಬೋಧನೆ ಮಾಡುವಂತೆ ಮಕ್ಕಳ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕೆಲವು ಮಕ್ಕಳ ಪಾಲಕರು ಶಾಲಾ ಹಾಸ್ಟೆಲಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಮೂಲಕ ಶಾಲಾ ಹಾಸ್ಟೆಲ್ ಕಮಿಟಿ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡರು. ಇಲ್ಲಿ ದಾಖಲಾತಿ ಪಡೆದಿರುವ ತಮಗೆ ಯೇಸುವಿನ ಪುಸ್ತಕವನ್ನು ನೀಡಿ ಇದನ್ನು ಮಾತ್ರ ಓದಬೇಕು ಎಂದು ಹೇಳಲಾಗುತ್ತದೆ. ಅಲ್ಲದೇ ಹಣೆಗೆ ಕುಂಕುಮ, ಕೈಗೆ ಬಳೆ ಹಾಗೂ ಕಾಲಿಗೆ ಚೈನು ಧರಿಸುವಂತಿಲ್ಲ, ತಲೆಗೆ ಜಡೆ ಹಾಕುವಂತಿಲ್ಲ ಎಂದು ನಮ್ಮ ಮೇಲೆ ದಿಗ್ಬಂಧನ ಹೇರಲಾಗುತ್ತದೆ. ಊಟ, ತಿಂಡಿ ಕೂಡ ಸರಿಯಾಗಿ ನೀಡುತ್ತಿಲ್ಲ. ಇಲ್ಲಿ ಊಟ, ತಿಂಡಿ ಹಾಕಬೇಕಾದರೆ ಅಡುಗೆಗೆ ತರಕಾರಿ ಕತ್ತರಿಸುವುದರಿಂದ ಹಿಡಿದು ಶೌಚಾಲಯ ಕೂಡ ತಮ್ಮಿಂದ ಸ್ವಚ್ಛಗೊಳಿಸಿಕೊಳ್ಳಲಾಗುತ್ತದೆ ಎಂದು ಮಕ್ಕಳು ದೂರಿದರು. ಸುಮಾರು 2 ಗಂಟೆ ಭಾರೀ ಗದ್ದಲ ಉಂಟಾಗಿದ್ದರಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಕ್ಕಳಿಂದ ಮಾಹಿತಿ ಪಡೆಯುವುದರೊಂದಿಗೆ ಹಾಸ್ಟೆಲಿನಲ್ಲಿ ಹುಡುಕಾಟ ನಡೆಸಿ ಸುಮಾರು 20ಕ್ಕೂ ಅಧಿಕ ಯೇಸುವಿನ ಪುಸ್ತಕಗಳನ್ನು ವಶÀಪಡಿಸಿಕೊಂಡರು. ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು. 10ಕ್ಕೂ ಅಧಿಕ ಪಾಲಕರು ಇಲ್ಲಿಂದ ತಮ್ಮ ಮಕ್ಕಳನ್ನು ಕರೆದೊಯ್ದರು. ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಹಾಸ್ಟೆಲಿಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.