ಅರಣ್ಯ ವೀಕ್ಷಕರಿಗೆ ಕಿರುಕುಳ

ಸಾಂದರ್ಭಿಕ ಚಿತ್ರ

ಜಿಲ್ಲಾ ಸಂಘ ಆರೋಪ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವನ್ಯಜೀವಿ ವಿಭಾಗದ ಕಳ್ಳಬೇಟೆ ನಿಯಂತ್ರಣ ಶಿಬಿರದಲ್ಲಿ ಕಾರ್ಯನಿರ್ವಹಿಸುತ್ತಿರುವ 16 ಮಂದಿ ಅರಣ್ಯ ದಿನಗೂಲಿ ನೌಕರರು ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ದ ಕ ಮತ್ತು ಉಡುಪಿ ಜಿಲ್ಲಾ ದಿನಗೂಲಿ ಅರಣ್ಯ ವೀಕ್ಷಕರ ಸಂಘವು ಆರೋಪಿಸಿದೆ.

ಕಾರ್ಕಳ ತಾಲೂಕಿನ ಮುಟ್ಲುಪಾಡಿ, ಬಚ್ಚಪ್ಪು, ಕೆರ್ವಾಶೆ ಹಾಗೂ ಈದು ಕಂಪೆಟ್ಟುವಿನ ಕಳ್ಳಬೇಟೆ ನಿಯಂತ್ರಣ ಶಿಬಿರದ ನೌಕರರು ಕಿರುಕುಳಕ್ಕೊಳಗಾಗಿದ್ದಾರೆ. ಕಾರ್ಕಳ ವನ್ಯಜೀವಿ ವಲಯಕ್ಕೆ ಸಂಬಂಧಿಸಿದ ಈ ಶಿಬಿರಗಳಲ್ಲಿ ಹಲವಾರು ವರ್ಷಗಳಿಂದ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅರಣ್ಯದೊಳಗೆ ನಡೆಯುತ್ತಿರುವ ಪ್ರಾಣಿಗಳ ಅವ್ಯಾಹತ ಬೇಟೆ, ಅರಣ್ಯಕ್ಕೆ ಬೆಂಕಿ ಬೀಳದಂತೆ ಗಮನ ನೀಡುವ ಕಾರ್ಯವನ್ನು ಈ ನೌಕರರು ನಿರ್ವಹಿಸುತ್ತಿದ್ದಾರೆ. ಯಾವುದೇ ಸೇವಾ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿರುವ ಈ ನೌಕರರು ರಾತ್ರಿ ಹಗಲೆನ್ನದೆ ಅರಣ್ಯದಲ್ಲಿ ರಕ್ಷಣಾ ಕಾರ್ಯ ಮಾಡುತ್ತಿದ್ದಾರೆ.

2017ನೇ ಸಾಲಿನ ಆಗಸ್ಟಿನಿಂದ ಕಳ್ಳಬೇಟೆ ನಿಯಂತ್ರಣ ಶಿಬಿರದಲ್ಲಿ ಕೆಲಸ ಮಾಡುವ ಅರಣ್ಯ ವೀಕ್ಷಕರನ್ನು ಪ್ರತೀ ತಿಂಗಳು ಕ್ಯಾಂಪ್ ಬದಲಾವಣೆ ಮಾಡುವ ಕಾರ್ಯವನ್ನು ವನ್ಯಜೀವಿ ವಿಭಾಗ ಆರಂಭಿಸಿದೆ ಎನ್ನಲಾಗಿದ್ದು, ಸೂಕ್ತ ವೇತನ ಇಲ್ಲದೆ, ಸೇವಾ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿರುವ ನೌಕರರು ಈ ದಿಢೀರ್ ಕ್ರಮದಿಂದ ಕಂಗಾಲಾಗಿ ಹೋಗಿದ್ದಾರೆ. ಕೆರ್ವಾಶೆ ಶಿಬಿರದ ನೌಕರ ದಿನೇಶ್ ಮಲೆಕುಡಿಯ ಹಾಗೂ ಗುರುಪ್ರಸಾದ್ ಎಂಬವರನ್ನು ಸೇವೆಯಿಂದ ಖಾಯಂ ವಜಾ ಮಾಡಲಾಗಿದ್ದು, ಇತರ ನೌಕರರು ತಮ್ಮ ಕೆಲಸ ಕಳೆದುಕೊಳ್ಳುವ ಬಗ್ಗೆ ಆತಂಕದಲ್ಲಿದ್ದಾರೆ. ಸರಕಾರ ಸಂಬಳ ನೀಡುತ್ತಿಲ್ಲ ಎಂಬ ಕಾರಣ ನೀಡಿ ಅವರನ್ನು ವಜಾ ಮಾಡಲಾಗಿದೆ ಎನ್ನಲಾಗಿದ್ದು, ಇದೀಗ ಈ ನಾಲ್ಕು ವಲಯದ ನೌಕರರು ತಮ್ಮ ಅಹವಾಲನ್ನು ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳ ಗಮನಕ್ಕೆ ತಂದಿದ್ದು, ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದಾರೆ.